ನವಜಾತ ಶಿಶುವನ್ನು ರಕ್ಷಿಸಿದ ಶ್ವಾನ

ರಾಯಪುರ: ಕೊರೆಯುವ ಚಳಿಯಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ನವಜಾತ ಶಿಶುವೊಂದನ್ನು ಹೊಲದಲ್ಲಿ ಬಿಟ್ಟು ಹೋಗಿದ್ದು, ರಾತ್ರಿಯಿಡೀ ನಾಯಿಯೊಂದು ಆರೈಕೆ ಮಾಡಿರುವ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.

ಮುಂಗೇಲಿ ಜಿಲ್ಲೆಯ ಲೊರ್ಮಿಯ ಸರಿಸ್ಟಾಲ್ ಗ್ರಾಮದ ಹೊಲವೊಂದರಲ್ಲಿ ಈ ಘಟನೆ ನಡೆದಿದೆ. ಹೆಣ್ಣು ಮಗುವನ್ನು ಹೊಲದಲ್ಲಿ ಬಿಟ್ಟು ಹೋಗಲಾಗಿದ್ದು, ರಾತ್ರಿಯಿಡೀ ನಾಯಿಯೊಂದು ಆರೈಕೆ ಮಾಡುತ್ತಿತ್ತು. ಮಗುವಿನ ಅಳುವನ್ನು ಕೇಳಿದ ಗ್ರಾಮಸ್ಥರು ರಕ್ಷಿಸಿದ್ದಾರೆ. ಮಗುವನ್ನು ಹೊಲದಲ್ಲಿ ಬಿಟ್ಟಿದ್ದಕ್ಕಾಗಿ ಜನರು ವಿರೋಧ ವ್ಯಕ್ತಪಡಿಸಿದ್ದು, ಪ್ರಾಣಿಯು ತೋರಿದ ಸಹಾನುಭೂತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೊಕ್ಕುಳಬಳ್ಳಿಯೊಂದಿಗೆ ಯಾವುದೇ ಬಟ್ಟೆ ಇಲ್ಲದೆ ಮಗುವನ್ನು ಹೊಲದಲ್ಲೇ ಬಿಟ್ಟು ಹೋಗಲಾಗಿತ್ತು. ಆಶ್ಚರ್ಯ ಎನ್ನುವಂತೆ ಪಕ್ಕದಲ್ಲಿಯೇ ಓಡಾಡುತ್ತಿದ್ದ ಬೀದಿನಾಯಿಗಳು ನವಜಾತ ಶಿಶುವನ್ನು ರಕ್ಷಿಸಿವೆ. ಮಗುವಿನ ಅಳು ಕೇಳಿದ ಗ್ರಾಮಸ್ಥರು ನಾಯಿಮರಿಗಳ ಜೊತೆಯಲ್ಲಿ ಮಗು ಇರುವುದನ್ನು ಕಂಡಿದ್ದಾರೆ. ಯಾವುದೇ ಗಾಯಗಳಿಲ್ಲದೆ ಮಗು ಪತ್ತೆಯಾಗಿದ್ದು, ನಾಯಿಯೊಂದು ತನ್ನ ಮರಿಗಳೊಂದಿಗೆ ಮಗುವನ್ನು ಕಾವಲು ಕಾಯುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮಗುವನ್ನು ನೋಡಿದ ಗ್ರಾಮಸ್ಥರು ಕೂಡಲೇ ಸ್ಥಳೀಯ ಪೊಲೀಸರಿಗೆ ಹಾಗೂ ಪಂಚಾಯತ್‌ಗೆ ಮಾಹಿತಿಯನ್ನು ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಬೀದಿನಾಯಿಗಳ ಬಾಯಿಗೆ ಪುಟ್ಟ ಬಾಲಕಿ ಬಲಿ

ನವಜಾತ ಶಿಶುವನ್ನು ಎಎಸ್‌ಐ ಚಿಂತಾರಾಮ್ ಬಿಂಜ್ವಾರ್ ಹಾಗೂ ಅವರು ತಂಡ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಥಮ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ನಂತರ, ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಿದ್ದಾರೆ. ನವಜಾತ ಶಿಶುವಿನ ಕುಟುಂಬದ ಪತ್ತೆಗಾಗಿ ಪೊಲೀಸರ ತಂಡ ಶೋಧ ನಡೆಸುತ್ತಿದ್ದಾರೆ ಹಾಗೂ ಈ ಬಗ್ಗೆ ತನಿಖೆ ಪ್ರಾರಂಭವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮಂಗ, ಶ್ವಾನಗಳ ವಾರ್‌ನಲ್ಲಿ ಪ್ರಾಣ ಕಳೆದುಕೊಂಡ 80 ನಾಯಿಮರಿಗಳು

ಸ್ಥಳೀಯರು ಮಗುವಿನ ಕುಟುಂಬದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಜೊತೆಗೆ ಈ ರೀತಿ ನಡೆಸಿಕೊಳ್ಳುವ ಕುಟುಂಬಕ್ಕೆ ಮಗುವನ್ನು ಹಿಂತಿರುಗಿಸಬಾರದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *