ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಜ್ವಾಲೆ ಕಾಣಿಸಿತು – ಬಳಿಕ ಮತ್ತೊಂದು ಮರಕ್ಕೆ ಡಿಕ್ಕಿ ಹೊಡೆಯಿತು

– ಮೂರು ಮಂದಿ ಹೆಲಿಕಾಪ್ಟರ್‌ನಿಂದ ಜಿಗಿಯುತ್ತಿದ್ದರು
– ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಮಾತು

ಚೆನ್ನೈ: ಭಾರತೀಯ ರಕ್ಷಣಾ ಪಡೆಯ ಮುಖ್ಯಸ್ಥರಾದ ಸಿಡಿಎಸ್ ಬಿಪಿನ್ ರಾವತ್ ಸಂಚರಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನಗೊಂಡು ರಾವತ್ ದಂಪತಿ ಸೇರಿ 13 ಮಂದಿ ಮೃತಪಟ್ಟಿದ್ದಾರೆ. ಹೆಲಿಕಾಪ್ಟರ್ ಪತನಗೊಳ್ಳುತ್ತಿದ್ದನ್ನು ಗಮನಿಸಿದ ಸ್ಥಳೀಯರ ಪ್ರಕಾರ ಮೊದಲು ದೊಡ್ಡ ಶಬ್ಧ ಕೇಳಿಬಂದಿದ್ದು ಹೊರ ಬಂದು ನೋಡುತ್ತಿದ್ದಂತೆ ಹೆಲಿಕಾಪ್ಟರ್ ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿಮಾಡಿದೆ.

ರಾವತ್ ದಂಪತಿ ಸೇರಿ 14 ಮಂದಿ Mi-17V5 ಸೇನಾ ಹೆಲಿಕಾಪ್ಟರ್‌ನಲ್ಲಿ ತಮಿಳುನಾಡಿನ ವೆಲ್ಲಿಂಗ್ಟನ್‍ಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಊಟಿ ಬಳಿಯ ಕೂನೂರಿನ ಸಮೀಪ ಬರುತ್ತಿದ್ದಂತೆ ಹೆಲಿಕಾಪ್ಟರ್ ಹವಾಮಾನ ವೈಪರೀತ್ಯದಿಂದಾಗಿ ಪತನಗೊಂಡಿದೆ. ಪರಿಣಾಮ 13 ಮಂದಿ ಮೃತಪಟ್ಟಿದ್ದು, ಒಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಏನಿದು ಸಿಡಿಎಸ್ ಹುದ್ದೆ? ಈ ಹುದ್ದೆಯನ್ನು ಸೃಷ್ಟಿಸಿದ್ದು ಯಾಕೆ? – ಇಲ್ಲಿದೆ ಸಮಗ್ರ ವಿವರ

ಹೆಲಿಕಾಪ್ಟರ್ ಪತನಗೊಳ್ಳುತ್ತಿರುವುದನ್ನು ನೋಡಿದ ಕೃಷ್ಣ ಸ್ವಾಮಿಯ ಪ್ರಕಾರ, ನನಗೆ ಮನೆಯಲ್ಲಿದ್ದಾಗ ಮೊದಲು ದೊಡ್ಡ ಶಬ್ಧ ಕೇಳಿ ಬಂತು. ಹೊರ ಬಂದು ನೋಡುತ್ತಿದ್ದಂತೆ ಹೆಲಿಕಾಪ್ಟರ್ ಮರಕ್ಕೆ ಡಿಕ್ಕಿ ಹೊಡೆದು ದೊಡ್ಡ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿದೆ. ಬಳಿಕ ಇನ್ನೊಂದು ಮರಕ್ಕೆ ಹೆಲಿಕಾಪ್ಟರ್ ಡಿಕ್ಕಿ ಹೊಡೆದಿದೆ. ಈ ವೇಳೆ ಮೂರು ಮಂದಿ ಹೆಲಿಕಾಪ್ಟರ್‌ನಿಂದ ಜಿಗಿಯುತ್ತಿರುವುದನ್ನು ಗಮನಿಸಿದೆ ಎಂದಿದ್ದಾರೆ.  ಇದನ್ನೂ ಓದಿ: ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ದುರ್ಮರಣ

ಇನ್ನೋರ್ವ ಪ್ರತ್ಯಕ್ಷದರ್ಶಿಯ ಪ್ರಕಾರ, ಮಂಜು ತುಂಬಿಕೊಂಡಿದ್ದ ಕಾರಣ ಹೆಲಿಕಾಪ್ಟರ್ ಮರಕ್ಕೆ ಡಿಕ್ಕಿ ಹೊಡೆದಿದೆ. ನಾನು ಸ್ಥಳಕ್ಕೆ ಹೋಗುತ್ತಿದ್ದಂತೆ ಬೆಂಕಿ ಹೊತ್ತಿ ಉರಿಯುತ್ತಿತ್ತು ಎಂದಿದ್ದಾರೆ. ಇದನ್ನೂ ಓದಿ: 2015ರಲ್ಲಿ ಹೆಲಿಕಾಪ್ಟರ್ ಪತನಗೊಂಡಾಗ ಪಾರಾಗಿದ್ದರು ಬಿಪಿನ್ ರಾವತ್

Comments

Leave a Reply

Your email address will not be published. Required fields are marked *