22,572 ಕೋಟಿ ರೂ ಪಾಕಿಸ್ತಾನಕ್ಕೆ ಸಾಲ ನೀಡಿದ ಸೌದಿ ಅರೇಬಿಯಾ

ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರ ಸಿಬ್ಬಂದಿಗೆ 3 ತಿಂಗಳಿಂದ ವೇತನ ನೀಡಿಲ್ಲ ಎನ್ನುವ ಸುದ್ದಿಯಾಗಿತ್ತು. ಇದೀಗ ಆರ್ಥಿಕ ಮುಗ್ಗಟ್ಟಿನಿಂದ ನಲುಗುತ್ತಿರುವ ಪಾಕಿಸ್ತಾನಕ್ಕೆ ಮಿತ್ರರಾಷ್ಟ್ರ ಸೌದಿ ಅರೇಬಿಯಾದ ನೆರವಿಗೆ ಬಂದಿದೆ.

ಸೌದಿ ಅರೇಬಿಯಾ, ಪಾಕ್‍ಗೆ 3 ಬಿಲಿಯನ್ ಡಾಲರ್ ಅಂದರೆ 22,572 ಕೋಟಿ ರೂ. ಸಾಲ ನೀಡಿದೆ. ಒಂದು ತಿಂಗಳ ಹಿಂದೆಯಷ್ಟೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೌದಿಗೆ ಭೇಟಿ ನೀಡಿ ರಾಜಕುಮಾರ ಮೊಹಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಇದನ್ನೂ ಓದಿ: ಇಮ್ರಾನ್‌ ಖಾನ್‌ ಸರ್ಕಾರ ಮಾನ ಹರಾಜು ಹಾಕಿದ ಪಾಕ್‌ ರಾಯಭಾರ ಕಚೇರಿ

ಸೌದಿ ಭೇಟಿ ಸಂದರ್ಭ ಪಾಕ್‍ಗೆ ಆರ್ಥಿಕ ನೆರವು ನೀಡುವ ಬಗ್ಗೆ ಇಮ್ರಾನ್ ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ಈ ಸಂದರ್ಭ 4.2 ಬಿಲಿಯನ್ ಡಾಲರ್ ನೆರವು ನೀಡಲು ಸೌದಿ ಸಮ್ಮತಿ ಸೂಚಿಸಿತ್ತು ಎನ್ನಲಾಗಿದೆ. ಅದರಲ್ಲಿ 3 ಬಿಲಿಯನ್ ಡಾಲರ್ ಹಣವನ್ನು ಸೌದಿ ಇದೀಗ ಪಾಕ್‍ಗೆ ನೀಡಿದೆ. ಇದನ್ನೂ ಓದಿ: ಜನವರಿ 1 ರಿಂದ ಎಟಿಎಂ ಶುಲ್ಕ ಹೆಚ್ಚಳ

ಸರ್ಕಾರ ಸಂಬಳ ಪಾವತಿಸಿಲ್ಲ ಎಂದು ಆರೋಪಿಸಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಟೀಕಿಸಿದ ವೀಡಿಯೋ ಹಾಗೂ ಪೋಸ್ಟ್‌ಗಳು ಸರ್ಬಿಯಾದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯ ಅಧಿಕೃತ ಟ್ವಿಟರ್‌ ಖಾತೆಯಿಂದಲೇ ಶೇರ್‌ ಆಗಿದ್ದು, ಇದು ಪ್ರಧಾನಿ ಇಮ್ರಾನ್‌ ಅವರನ್ನು ಮುಜುಗರಕ್ಕೀಡು ಮಾಡಿದೆ.

ದೇಶದಲ್ಲಿ ಹಣದುಬ್ಬರ ಹೆಚ್ಚುತ್ತಿರುವ ಕಾರಣ, ಸರ್ಕಾರಿ ಅಧಿಕಾರಿಗಳಾಗಿ ನಾವು ನಿಮಗಾಗಿ 3 ತಿಂಗಳಿಂದ ಸಂಬಳವಿಲ್ಲದೇ ಕೆಲಸ ಮಾಡಿದ್ದೇವೆ. ಶಾಲೆ ಶುಲ್ಕ ಕಟ್ಟಿಲ್ಲ ಎಂದು ನಮ್ಮ ಮಕ್ಕಳನ್ನು ಶಾಲೆಯಿಂದ ಹೊರಹಾಕಲಾಗಿದೆ. ಇದು ಹೊಸ ಪಾಕಿಸ್ತಾನವೇ ಎಂದು ರಾಯಭಾರಿ ಕಚೇರಿಯಿಂದ ಟ್ವೀಟ್‌ ಮಾಡಲಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯ, ಸರ್ಬಿಯಾದಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯ ಅಧಿಕೃತ ಟ್ವಿಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಖಾತೆಗಳು ಹ್ಯಾಕ್‌ ಆಗಿವೆ. ಪೋಸ್ಟ್‌ಗಳನ್ನು ಅಳಿಸಿ ಹಾಕಲಾಗಿದೆ ಎಂದು ತಿಳಿಸಿತ್ತು.

Comments

Leave a Reply

Your email address will not be published. Required fields are marked *