ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ: ಸುರ್ಜೆವಾಲಾ

ನವದೆಹಲಿ: ಬಸವರಾಜ ಬೊಮ್ಮಾಯಿ ಅವರು ಗೃಹಸಚಿವರಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ. ಬಹುಕೋಟಿ ಹಗರಣದಲ್ಲಿ ಕರ್ನಾಟಕ ಸರ್ಕಾರವೇ ಭಾಗಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಗಂಭೀರ ಆರೋಪ ಮಾಡಿದ್ದಾರೆ.

ದೆಹಲಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತಂತ್ರ ಭಾರತದ ಬಳಿಕದ ಅತಿದೊಡ್ಡ ಹಗರಣ ಇದಾಗಿದೆ. ಒಂದು ಕಾಯಿನ್ ಬೆಲೆ 51 ಲಕ್ಷ ರೂ. ಇದೆ. ಕರ್ನಾಟಕ ಸರ್ಕಾರ ಕೂಡ ಈ ಹಗರಣದಲ್ಲಿ ಭಾಗಿಯಾಗಿದೆ. ಇಷ್ಟು ದೊಡ್ಡ ಹಗರಣ ನಡೆದರೂ ಇಂಟರ್ ಪೋಲ್, ಎನ್‍ಐಎ, ಇಡಿ ಎಲ್ಲವೂ ಸುಮ್ಮನೆ ಇವೆ. ಇದೆಲ್ಲವನ್ನೂ ಗಮನಿಸಿದರೆ ಸರ್ಕಾರ ಹಗರಣವನ್ನು ಮುಚ್ಚಿಡುವ ಪ್ರಯತ್ನ ನಡೆಸುತ್ತಿದೆ ಎಂದು ದೂರಿದ್ದಾರೆ.

ಈ ಹಗರಣದಲ್ಲಿ ತನಿಖಾ ಸಂಸ್ಥೆಗಳ ದಾರಿ ತಪ್ಪಿಸಲಾಗುತ್ತಿದೆ. ನವೆಂಬರ್ 14ರಂದು ಹ್ಯಾಕರ್ ಶ್ರೀಕಿ ಬಂಧನವಾಗಿತ್ತು. ಆಗ ಶ್ರೀಕಿ ತಾನು ಕದ್ದಿದ್ದ ಒಂದು ಬಿಟ್ ಕಾಯಿನ್ ವರ್ಗಾವಣೆ ಮಾಡಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿ ಇದೆಲ್ಲ ನಡೆಯಲು ಹೇಗೆ ಸಾಧ್ಯ? 5,240 ಕೋಟಿ ಮೊತ್ತದ ಬಿಟ್ ಕಾಯಿನ್ ವರ್ಗಾವಣೆ ಆಗಿದೆ. ಅಧಿಕಾರದಲ್ಲಿ ಇರುವವರ ಪಾತ್ರದ ಬಗ್ಗೆ ಅನುಮಾನ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ಯಾರಾ ಒಲಿಂಪಿಕ್ಸ್ ಆಟಗಾರ ಸುಹಾಸ್ ಯತೀರಾಜ್‍ಗೆ ಬಂಪರ್ – ವಿಶೇಷ ಗೌರವಕ್ಕೆ ಭಾಜನರಾದ ಕನ್ನಡಿಗ

ಇಷ್ಟು ದೊಡ್ಡ ಹಗರಣ ನಡೆದರೂ ಕರ್ನಾಟಕ ಸರ್ಕಾರ ಯಾಕೆ ಸುಮ್ಮನಿದೆ. ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಅವರು ಏಕೆ ಮೌನವಹಿಸಿದ್ದಾರೆ. ನೀವು ತಲೆಕೆಡಿಸಿಕೊಳ್ಳಬೇಡಿ ಎಂದು ಸಿಎಂಗೆ ಪ್ರಧಾನಿ ಯಾಕೆ ಹೇಳಿದ್ದಾರೆ ಎಂದು ಸುರ್ಜೆವಾಲಾ ಪ್ರಶ್ನಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ ಭಾರೀ ಸದ್ದು ಮಾಡುತ್ತಿದೆ. ಇದರ ಮಧ್ಯೆ ಆಡಳಿತ ಹಾಗೂ ಪ್ರತಿಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ.

Comments

Leave a Reply

Your email address will not be published. Required fields are marked *