ವೇಡ್‌ ಹ್ಯಾಟ್ರಿಕ್‌ ಸಿಕ್ಸರ್‌ – ಆಸ್ಟ್ರೇಲಿಯಾ ಫೈನಲಿಗೆ, ಪಾಕ್‌ ಮನೆಗೆ

ದುಬೈ: 19ನೇ ಓವರಿನಲ್ಲಿ ಮ್ಯಾಥ್ಯೂ ವೇಡ್ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ಪರಿಣಾಮ ಆಸ್ಟ್ರೇಲಿಯಾ ರೋಚಕ 5 ವಿಕೆಟ್‌ ಜಯ ಸಾಧಿಸಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಲೀಗ್‍ನ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಫೈನಲ್ ಪ್ರವೇಶಿಸುವ ಕನಸು ಕಂಡಿದ್ದ ಪಾಕಿಸ್ತಾನದ ಕನಸು ಭಗ್ನವಾಗಿದೆ.

ಪಾಕಿಸ್ತಾನ ನೀಡಿದ 177 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 19 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 177 ರನ್‌ ಹೊಡೆಯಿತು. ಈ ಮೂಲಕ ಎರಡನೇ ಬಾರಿ ಆಸ್ಟ್ರೇಲಿಯಾ ಫೈನಲ್‌ ಪ್ರವೇಶಿಸಿತು.

ಕೊನೆಯ 18 ಎಸೆತಗಳಿಗೆ 38 ರನ್‌ ಬೇಕಿತ್ತು. 18 ನೇ ಓವರಿನಲ್ಲಿ 15 ರನ್‌ ಬಂದಿತ್ತು. ಶಾಹಿನ್‌ ಅಫ್ರಿದಿ ಎಸೆದ 19ನೇ ಓವರ್‌ನಲ್ಲಿ 22 ರನ್‌ ಬಂತು. 19 ನೇ ಓವರಿನ ಕೊನೆಯ ಮೂರು ಎಸೆತದಲ್ಲಿ ವೇಡ್‌ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟರು.

ವೇಡ್ ಮತ್ತು ಸ್ಟೋಯಿನಿಸ್ ಮುರಿಯದ 6ನೇ ವಿಕೆಟಿಗೆ 41 ಎಸೆತಗಳಿಗೆ 81 ರನ್‌ ಚಚ್ಚಿದರು. ವಾಡೆ 41 ರನ್(17‌ ಎಸೆತ, 2 ಬೌಂಡರಿ, 4 ಸಿಕ್ಸರ್)‌ ಸ್ಟೋಯಿನಿಸ್ 40 ರನ್‌(31 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹೊಡೆದರು.

ಆಸ್ಟ್ರೇಲಿಯಾ ತಂಡ ಆರಂಭದಿಂದಲೇ ವಿಕೆಟ್‍ಗಳನ್ನು ಕಳೆದುಕೊಳ್ಳುತ್ತ ಸಾಗಿತ್ತು. ನಾಯಕ ಆರನ್ ಫಿಂಚ್ ಶೂನ್ಯ ಸುತ್ತಿದರೆ, ಸ್ಟೀವ್ ಸ್ಮಿತ್ 5 ರನ್‍ಗೆ ಸುಸ್ತಾದರು. ಆದರೆ ಆಸ್ಟ್ರೇಲಿಯಾ ತಂಡಕ್ಕೆ ಒಂದು ಕಡೆ ಆಸರೆಯಾಗಿದ್ದ ಡೇವಿಡ್ ವಾರ್ನರ್ ಉತ್ತಮವಾಗಿ ಬ್ಯಾಟ್‌ ಬೀಸಿ 49 ರನ್ (30 ಎಸೆತ, 3 ಬೌಂಡರಿ, 3 ಸಿಕ್ಸ್) ಬಾರಿಸಿ ವಿಕೆಟ್ ಒಪ್ಪಿಸಿದರು. ನಂತರ ಮಾರ್ಕಸ್ ಸ್ಟೋಯಿನಿಸ್ ಮತ್ತು ಮ್ಯಾಥ್ಯೂ ವೇಡ್ ಆಸ್ಟ್ರೇಲಿಯಾ ಗೆಲುವಿಗೆ ಹೋರಾಟ ನಡೆಸಿ ಗೆಲುವು ತಂದು ಕೊಟ್ಟರು.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡಕ್ಕೆ ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ 71 ರನ್ (60 ಎಸೆತ) ಸೇರಿಸಿತು. ಈ ವೇಳೆ ದಾಳಿಗಿಳಿದ ಜಂಪಾ, ಬಾಬರ್ ಅಜಮ್ 39 ರನ್ (34 ಎಸೆತ, 5 ಬೌಂಡರಿ) ವಿಕೆಟ್ ಪಡೆಯವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಐಪಿಎಲ್ ಬಿಡ್ಡಿಂಗ್‍ನಲ್ಲಿ ಈ ಇಬ್ಬರಿಗೆ ಭಾರೀ ಬೇಡಿಕೆ

ನಂತರ ಜೊತೆಯಾದ ಮೊಹಮ್ಮದ್ ರಿಜ್ವಾನ್ ಮತ್ತು ಫಖರ್ ಜಮಾನ್ ಮತ್ತಷ್ಟು ವೇಗವಾಗಿ ರನ್ ಗಳಿಸಲು ಮುಂದಾದರು. ಆಸೀಸ್ ಬೌಲರ್‍ಗಳ ಬೆಂಡೆತ್ತಿದ ಈ ಜೋಡಿ ಕೂಡ ಉತ್ತಮವಾದ ಜೊತೆಯಾಟವಾಡಿತು. 2ನೇ ವಿಕೆಟ್‍ಗೆ ಈ ಜೋಡಿ 72 ರನ್ (46 ಎಸೆತ) ಒಟ್ಟುಗೂಡಿಸಿತು. ರಿಜ್ವಾನ್ 67 ರನ್ (52 ಎಸೆತ, 3 ಬೌಂಡರಿ, 4 ಸಿಕ್ಸ್) ಬಾರಿಸಿ ಔಟ್ ಆದರು. ಫಖರ್ ಜಮಾನ್ ಇನ್ನಿಂಗ್ಸ್ ಅಂತ್ಯದವರೆಗೆ ಬ್ಯಾಟ್ ಬೀಸಿ ಅಜೇಯ 55 ರನ್ (32 ಎಸೆತ, 3 ಬೌಂಡರಿ, 4 ಸಿಕ್ಸ್) ಸಿಡಿಸಿದರು. ಅಂತಿಮವಾಗಿ 20 ಓವರ್‍ ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 176 ರನ್ ಪೇರಿಸಿತು. ಇದನ್ನೂ ಓದಿ: ಐಪಿಎಲ್‍ನ ನೂತನ ತಂಡ ಅಹಮದಾಬಾದ್‍ನ ಕೋಚ್ ಆಗಲಿದ್ದಾರೆ ರವಿಶಾಸ್ತ್ರಿ?

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 2 ವಿಕೆಟ್ ಕಿತ್ತು ಮಿಂಚಿದರೆ, ಪ್ಯಾಟ್ ಕಮ್ಮಿನ್ಸ್ ಮತ್ತು ಆ್ಯಡಂ ಜಂಪಾ ತಲಾ 1 ವಿಕೆಟ್ ಪಡೆದರು.

Comments

Leave a Reply

Your email address will not be published. Required fields are marked *