ಚಿಕ್ಕಬಳ್ಳಾಪುರದಲ್ಲಿ ಮತ್ತೆ ಭಾರೀ ಸ್ಫೋಟದ ಸದ್ದು- ಭೂಕಂಪ ಭಯಕ್ಕೆ ಊರು ಬಿಡ್ತಿರೋ ಜನ!

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಪದೇ ಪದೇ ಭೂಮಿಯ ಅಂತರಾಳದಿಂದ ಭಾರೀ ಸ್ಫೋಟದ ಸದ್ದು ಕೇಳಿ ಬರುತ್ತಿದ್ದು, ಭೂಕಂಪನದ ಭಯಕ್ಕೆ ಜನತೆ ಬೆಚ್ಚಿಬೀಳುತ್ತಿದ್ದಾರೆ. ಯಾವಾಗ ತಮ್ಮ ಮನೆ ಬಿದ್ದು ಹೋಗುತ್ತದೆಯೋ ಎಂಬ ಭಯದಿಂದ ಗ್ರಾಮವನ್ನೇ ತೊರೆಯುತ್ತಿದ್ದಾರೆ.

ನವೆಂಬರ್ 09 ರ ರಾತ್ರಿ ವೇಳೆ ಮೊದಲ ಬಾರಿಗೆ ಜೋರಾದ ಸ್ಫೋಟದ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿತ್ತು. ಈ ಬಗ್ಗೆ ಡಿಸಿ ಆರ್.ಲತಾ, ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ಅವರು ಗ್ರಾಮಕ್ಕೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಅಧಿಕೃತವಾಗಿ ಭೂಕಂಪನ ಆಗಿರುವ ಬಗ್ಗೆ ಮಾಪನ ಕೇಂದ್ರಗಳಲ್ಲಿ ವರದಿಯಾಗಿಲ್ಲ. ಇದು ಭೂಕಂಪನ ಅಲ್ಲ. ಜನ ಭಯ ಪಡಬೇಡಿ ಎಂದು ತಿಳಿಸಿದ್ದರು. ಇದನ್ನೂ ಓದಿ: ಐಸಿಸ್ ಉಗ್ರ ಸಂಘಟನೆಗೆ ಹಿಂದುತ್ವ ಹೋಲಿಕೆ – ವಿವಾದಕ್ಕೆ ಸಿಲುಕಿದ ಖುರ್ಷಿದ್ ಪುಸ್ತಕ

ಮೊದಲ ದಿನ ಅಧಿಕಾರಿಗಳ ಭೇಟಿಯಿಂದ ಜನ ನಿರಾಳರಾಗಿದ್ದರು. ಆದರೆ ನಿನ್ನೆ ರಾತ್ರಿಯೂ ಭೂಮಿಯಿಂದ ಜೋರು ಸದ್ದು ಕೇಳಿ ಬಂದಿದೆ. ಇದರಿಂದ ಜನ ಮತ್ತಷ್ಟು ಆತಂಕ್ಕೀಡಾಗಿದ್ದಾರೆ. ಭೂಕಂಪ ಭೀತಿಯಿಂದ ಎಲ್ಲರೂ ಗ್ರಾಮ ತೊರೆಯುತ್ತಿದ್ದಾರೆ. ಇದನ್ನೂ ಓದಿ: ಪರಿಷತ್ ಚುನಾವಣೆ – ಕಾಂಗ್ರೆಸ್ ಟಿಕೆಟ್‍ಗೆ 20ಕ್ಕೂ ಹೆಚ್ಚು ಅಲ್ಪಸಂಖ್ಯಾತರ ಕಸರತ್ತು

ಈವರೆಗೆ ಶೇ. 20ಕ್ಕೂ ಹೆಚ್ಚು ಮಂದಿ ಮನೆಗಳನ್ನು ಖಾಲಿ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಭೇಟಿ ನೀಡಿ ಜನರಿಗೆ ಪರಿಸ್ಥಿತಿ ಮನವರಿಕೆ ಮಾಡಲು ಯತ್ನಿಸಿದ್ದಾರೆ.

Comments

Leave a Reply

Your email address will not be published. Required fields are marked *