ದೀಪಾವಳಿ ಗಿಫ್ಟ್ ಅಲ್ಲ, ಪೆಟ್ರೋಲ್, ಡೀಸೆಲ್ ಬೆಲೆ ಇನ್ನೂ ಕಡಿಮೆಯಾಗಬೇಕು: ಸತೀಶ್ ಜಾರಕಿಹೊಳಿ

ಚಿಕ್ಕೋಡಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇನ್ನೂ ಕಡಿಮೆಯಾಗಬೇಕು. ಇದು ದೀಪಾವಳಿ ಗಿಫ್ಟ್ ಅಲ್ಲ ಎಂದು ಯಮಕನಮರಡಿ ಕ್ಷೇತ್ರದ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಯಮಕನಮರಡಿ ಮತಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಲೆಯನ್ನು ಬೆಲೆ ಕಡಿಮೆ ಎಂದು ಒಪ್ಪಿಕೊಳ್ಳಲು ಆಗುವುದಿಲ್ಲ. ಬೆಲೆ ಕಡಿಮೆ ಮಾಡಿದ್ದು, ಜನರ ಹೊರೆ ತಪ್ಪಿಸಲು ಆಗುವುದಿಲ್ಲ ಎಂದರು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ – ವಾಹನ ಸವಾರರ ಮಿಶ್ರ ಪ್ರತಿಕ್ರಿಯೆ

ಹಾನಗಲ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದು, ಕೇವಲ ಸಿಎಂ ಬಸವರಾಜ ಬೊಮ್ಮಾಯಿ ಮಾತ್ರ ಜವಾಬ್ದಾರಿ ಅಲ್ಲ. ಈ ಸೋಲಿಗೆ ಇಡೀ ಬಿಜೆಪಿ ಪಕ್ಷವೇ ಜವಾಬ್ದಾರಿ ಹೊರಬೇಕು ಎಂದು ಸಿಎಂಗೆ ಬೆಂಬಲಿಸಿದರು.

ಬಳಿಕ ಅಧಿಕಾರಿಗಳ ಸಭೆ ನಡೆಸಿದ ಸತೀಶ್ ಜಾರಕಿಹೊಳಿ ಅವರು ಕ್ಷೇತ್ರದ ಜಲಜೀವನ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ಡಿ.ಎಚ್.ಹೂಗಾರ, ತಾಲೂಕು ಆರೋಗ್ಯಾಧಿಕಾರಿ ಉದಯ ಕುಡಚಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರಾದ ಕಿರಣ್ ರಜಪೂತ, ಇಲಿಯಾಸ್ ಇನಾಮದಾರ, ರೋಹಿತ್ ಚಿಟ್ನಿಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದನ್ನೂ ಓದಿ: ಲಂಡನ್‍ನಿಂದ ಬರೋ ಉಡುಗೊರೆಗೆ ಆಸೆಪಟ್ಟು 4.49 ಲಕ್ಷ ರೂ. ಕಳ್ಕೊಂಡ್ರು!

Comments

Leave a Reply

Your email address will not be published. Required fields are marked *