ಚಿನ್ನದ ಮೊಟ್ಟೆ ಇಟ್ಟ ಐಪಿಎಲ್‌ – 2008ರಲ್ಲಿ ಬಿಡ್‌ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

ದುಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮತ್ತು ಫ್ರಾಂಚೈಸಿಗಳು ಚಿನ್ನದ ಮೊಟ್ಟೆ ಇಡುತ್ತಿರುವ ಕೋಳಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಚಿನ್ನದ ಮೊಟ್ಟೆಯ ಮೌಲ್ಯ ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ? ಮುಂದೆ ಎಷ್ಟು ಏರಿಕೆಯಾಗಬಹುದು ಎಂಬ ಪ್ರಶ್ನೆಗಳಿಗೆ ಸೋಮವಾರ ನಡೆದ ಬಿಡ್ಡಿಂಗ್‌ ಉತ್ತರ ನೀಡಿದೆ.

ಹೌದು. ದುಬೈಯಲ್ಲಿ ನಡೆದ ಬಿಡ್ಡಿಂಗ್‌ನಲ್ಲಿ ಸಿವಿಸಿ ಕ್ಯಾಪಿಟಲ್‌ 5,600 ಕೋಟಿ ರೂ. ನೀಡಿ ಅಹಮದಾಬಾದ್‌ ತಂಡವನ್ನು ಖರೀದಿಸಿದರೆ ಆರ್‌ಪಿಎಸ್‌ಜಿ ಗ್ರೂಪ್‌ 7,090 ಕೋಟಿ ರೂ. ಬಿಡ್‌ ಮಾಡಿ ಲಕ್ನೋ ತಂಡವನ್ನು ಖರೀದಿಸಿದೆ.

ಬಿಸಿಸಿಐ ಎರಡು ಫ್ರಾಂಚೈಸಿಗಳ ಮಾರಾಟದಿಂದ ಒಟ್ಟು 10 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಿತ್ತು. ಆದರೆ ಬಿಸಿಸಿಐ ನಿರೀಕ್ಷೆಗೂ ಮೀರಿ 2,690 ಕೋಟಿ ರೂ. ಹೆಚ್ಚುವರಿ ಆದಾಯವನ್ನು ಗಳಿಸಿದೆ.

ಬಿಡ್‌ ಎಷ್ಟಿತ್ತು?
ಅದಾನಿ ಗ್ರೂಪ್‌ ಅಹಮದಾಬಾದ್‌, ಲಕ್ನೋಗೆ 5,100 ಕೋಟಿ ರೂ. ಬಿಡ್‌ ಮಾಡಿತ್ತು. ಕೋಟಕ್‌ ಅಹಮದಾಬಾದ್‌ಗೆ 4,513 ಕೋಟಿ ರೂ., ಲಕ್ನೋಗೆ 4,512 ಕೋಟಿ ರೂ. ಬಿಡ್‌ ಮಾಡಿದ್ದರೆ ಆಲ್‌ ಕಾರ್ಗೋ ಲಾಜಿಸ್ಟಿಕ್ಸ್‌ ಅಹಮದಾಬಾದ್‌ಗೆ 4,140 ಕೋಟಿ ರೂ., ಲಕ್ನೋಗೆ 4,304 ಕೋಟಿ ರೂ. ನೀಡುವುದಾಗಿ ತಿಳಿಸಿತ್ತು.

ಅವರಾಂ ಗ್ಲೇಜರ್‌ ಅಹಮಾದಾಬಾದ್‌ಗೆ 4,128.65 ಕೋಟಿ ರೂ., ಲಕ್ನೋಗೆ 4,023.99 ಕೋಟಿ ರೂ.ನೀಡಲು ಸಿದ್ಧವಿತ್ತು. ಹಿಂದೂಸ್ತಾನ್‌ ಟೈಮ್ಸ್‌ ಮೀಡಿಯಾ ಅಹಮದಾಬಾದ್‌ಗೆ 4,275 ಕೋಟಿ ರೂ., ಲಕ್ನೋಗೆ 4,510 ಕೋಟಿ ರೂ. ಬಿಡ್‌ ಮಾಡಿತ್ತು.

ಕ್ಯಾಪ್ರಿ ಗ್ಲೋಬಲ್‌ ಅಹಮದಾಬಾದ್‌ ಮತ್ತು ಲಕ್ನೋಗೆ 4,204 ಕೋಟಿ ರೂ. ಬಿಡ್‌ ಮಾಡಿದ್ದರೆ ಅಹಮದಾಬಾದ್‌ಗೆ ಸಿವಿಸಿ 5,625 ಕೋಟಿ ರೂ., ಲಕ್ನೋಗೆ 5,166 ಕೋಟಿ ರೂ. ಬಿಡ್‌ ಮಾಡಿತ್ತು.

ಆರ್‌ಪಿಎಸ್‌ಜಿ ಅಹಮದಾಬಾದ್‌ ಮತ್ತು ಲಕ್ನೋಗೆ 7,090 ಕೋಟಿ ರೂ. ಬಿಡ್‌ ಮಾಡಿತ್ತು. ಟೊರೆಂಟ್‌ ಸ್ಪೋರ್ಟ್ಸ್‌ ಅಹಮದಾಬಾದ್‌ಗೆ 4,653 ಕೋಟಿ ರೂ., ಲಕ್ನೋಗೆ 4,356 ಕೋಟಿ ರೂ. ಬಿಡ್‌ ಮಾಡಿತ್ತು. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ

8 ತಂಡಗಳ ಬಿಡ್‌ ಎಷ್ಟಿತ್ತು?
2008ರಲ್ಲಿ ಐಪಿಎಲ್‌ ಆರಂಭಗೊಂಡಗೊಂಡಾಗ ಮುಂಬೈ ತಂಡವನ್ನು ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ 447.6 ಕೋಟಿಗೆ ಬಿಡ್‌ ಮಾಡಿದ್ದೆ ದೊಡ್ಡ ಮೊತ್ತವಾಗಿತ್ತು.

ಮುಂಬೈ ಇಂಡಿಯನ್ಸ್‌ 447.6 ಕೋಟಿ ರೂ., ರಾಯಲ್‌ ಚಾಲೆಂಜರ್ಸ್‌ 446 ಕೋಟಿ ರೂ., ಚೆನ್ನೈ ಸೂಪರ್‌ ಕಿಂಗ್ಸ್‌ 364 ಕೋಟಿ ರೂ., ಪಂಜಾಬ್‌ ಕಿಂಗ್ಸ್‌ 304 ಕೋಟಿ ರೂ., ಕೋಲ್ಕತ್ತಾ ನೈಟ್‌ ರೈಡರ್ಸ್‌ 300 ಕೋಟಿ ರೂ., ರಾಯಸ್ಥಾನ್‌ ರಾಯಲ್ಸ್‌ 268 ಕೋಟಿ ರೂ., ಕೊಚ್ಚಿ ಟಸ್ಕರ್ಸ್‌ 1,533 ಕೋಟಿ ರೂ., ಸಹರಾ ವಾರಿಯರ್ಸ್‌ ಪುಣೆ ತಂಡವನ್ನು 1,702 ಕೋಟಿ ರೂ. ಬಿಡ್‌ ಮಾಡಿ ಖರೀದಿಸಿತ್ತು.

ಮುಂದೆ ಎಷ್ಟಾಗಬಹುದು?
2008ರಲ್ಲಿ ಮುಂಬೈ ತಂಡವನ್ನು 447.6 ಕೋಟಿ ರೂ. ನೀಡಿ ರಿಲಯನ್ಸ್‌ ಖರೀದಿಸಿತ್ತು. ಈ ಮೊತ್ತಕ್ಕೆ ಹೋಲಿಸಿದಾಗ ಈಗ ಲಕ್ನೋ ತಂಡದ ಬಿಡ್‌ ಮೊತ್ತ 15 ಪಟ್ಟು ಹೆಚ್ಚಾಗಿದೆ. ಇದು ಕೇವಲ 13 ವರ್ಷದಲ್ಲಿ ನಡೆದ ಬೆಳವಣಿಗೆ. ಐಪಿಎಲ್‌ ಅನ್ನು ಇಂಗ್ಲೀಷ್‌ ಪ್ರೀಮಿಯರ್‌ ಫುಟ್‌ಬಾಲ್‌ನಂತೆ ಜನಪ್ರಿಯತೆಗೊಳಿಸಬೇಕೆಂಬ ಉದ್ದೇಶವನ್ನು ಬಿಸಿಸಿಐ ಹೊದಿದೆ. ಈ ಫುಟ್‌ಬಾಲ್‌ ಲೀಗ್‌ನಲ್ಲಿ 20 ತಂಡಗಳು ಭಾಗವಹಿಸುತ್ತವೆ.

ಸದ್ಯ ಈಗ ಶನಿವಾರ, ಭಾನುವಾರ ಎರಡು ಐಪಿಎಲ್‌ ಪಂದ್ಯಗಳು ನಡೆಯುತ್ತಿವೆ. ಮುಂದೆ ಮತ್ತಷ್ಟು ತಂಡಗಳು ಸೇರ್ಪಡೆಯಾದರೆ ವಾರದ ಇತರೇ ದಿನಗಳಲ್ಲೂ ಪಂದ್ಯ ನಡೆಯುವುದರಲ್ಲಿ ಅನುಮಾನವಿಲ್ಲ. ಹೊಸ ತಂಡಗಳಿಂದಾಗಿ ಆಟಗಾರರಿಗೂ ಅವಕಾಶ ಸಿಕ್ಕಿದಂತಾಗುತ್ತದೆ. ಇದರಿಂದಾಗಿ ಬಿಸಿಸಿಐ ಜೊತೆ ಸರ್ಕಾರಕ್ಕೂ ತೆರಿಗೆ ರೂಪದಲ್ಲಿ ಆದಾಯ ಹೆಚ್ಚು ಬರಲಿದೆ.

Comments

Leave a Reply

Your email address will not be published. Required fields are marked *