ಕೆಲಸಗಾರರ ಮೇಲಿನ ಕೋಪದಲ್ಲಿ ತನ್ನ ಮಗನಿಗೇ ಗುಂಡು ಹೊಡೆದ ಉದ್ಯಮಿ

ಮಂಗಳೂರು: ಮಂಗಳೂರಿನಲ್ಲಿ ಹಾಡಹಗಲಲ್ಲೇ ಗುಂಡಿನ ಸದ್ದು ಕೇಳಿದೆ. ಸಂಜೆ ಹೊತ್ತಿಗೆ ತಣ್ಣಗಿದ್ದ ಮಂಗಳೂರಿನ ಮೊರ್ಗನ್ಸ್ ಗೇಟ್ ಬೆಚ್ಚಿಬಿದ್ದಿದೆ. ಓರ್ವ ಬಾಲಕನ ಮೇಲೆ ಒಂದು ಗುಂಡು ಹಾರಿದ್ದು, ಅಪ್ಪನೇ ಮಗನ ಮೇಲೆ ಗುಂಡು ಹಾರಿಸಿದ್ದಾನೆ ಎನ್ನಲಾಗುತ್ತಿದೆ.

ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮೋರ್ಗನ್ಸ್ ಗೇಟ್ ಬಳಿ ಸಂಜೆ 3.30ರ ಸುಮಾರಿಗೆ ಬಂದೂಕಿನಿಂದ ಗುಂಡು ಹಾರಿದೆ. ಎರಡು ಸುತ್ತು ಹಾರಿದ ಗುಂಡಿಗೆ ಮೋರ್ಗನ್ಸ್ ಗೇಟ್ ನ ನಿವಾಸಿಗಳು ಮತ್ತು ಸಾರ್ವಜನಿಕರು ಬೆಚ್ಚಿಬಿದ್ದಿದ್ದರು. ವೈಷ್ಣವಿ ಎಕ್ಸ್‍ಪ್ರೆಸ್ ಕಾರ್ಗೋ ಲಿಮಿಟೆಡ್ ನ ಎದುರು ಘಟನೆ ನಡೆದಿದೆ. ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಲಿಮಿಟೆಡ್ ಮಾಲೀಕ ರಾಜೇಶ್ ಪ್ರಭು ಅವರಿಗೆ ಸೇರಿದ ಪಿಸ್ತೂಲ್ ನಿಂದ ಫೈರಿಂಗ್ ಆಗಿದೆ. ರಾಜೇಶ್ ಪ್ರಭು ಅವರ ಮಗ 14 ವರ್ಷದ ಸುಧೀಂದ್ರ ಪ್ರಭು ಮೇಲೆ ಗುಂಡೇಟು ಬಿದ್ದಿದೆ. ಪಿಸ್ತೂಲ್ ನಿಂದ ಹಾರಿದ ಬುಲೆಟ್ ಸುಧೀಂದ್ರ ಪ್ರಭು ತಲೆ ಭಾಗದ ಸೈಡ್ ನಲ್ಲಿ ಸೀಳಿಕೊಂಡು ಹೋಗಿದೆ. ತಕ್ಷಣ ಸುಧೀಂದ್ರ ಪ್ರಭುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಸುಬ್ರಹ್ಮಣ್ಯದ ಪಯಸ್ವಿನಿ ನದಿಯಲ್ಲಿ ಅಕ್ರಮ ಮರಳು ದಂಧೆ- ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಮಗ ಸುದೀಂದ್ರ ಪ್ರಭು ಮೇಲೆ ತಂದೆ ರಾಜೇಶ್ ಪ್ರಭುವೇ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಲಿಮಿಟೆಡ್ ನ ಮಾಲೀಕರಾದ ರಾಜೇಶ್ ಪ್ರಭು ಮಂಗಳೂರಿನ ಖ್ಯಾತ ಉದ್ಯಮಿ. ರಾಜ್ಯ ರಾಜಕಾರಣಿಗಳ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದವರು. ತಮ್ಮ ಉದ್ಯಮದಲ್ಲಿ ಸಾಕಷ್ಟು ಜನರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ.

ಬಲ್ಲ ಮೂಲಗಳ ಪ್ರಕಾರ, ಇಂದು ಸಂಜೆ ಡ್ರೈವರ್ ಚಂದ್ರು ಮತ್ತು ಮತ್ತೊಬ್ಬ ಕೆಲಸದ ಸಿಬ್ಬಂದಿ ಆಶ್ರಫ್ ಸಂಬಳದ ವಿಚಾರಕ್ಕಾಗಿ ರಾಜೇಶ್ ಪ್ರಭು ಜೊತೆ ಜಗಳವಾಡುತ್ತಿದ್ದರು. ಈ ವೇಳೆ ರಾಜೇಶ್ ಪ್ರಭು ಮಗ ಸುಧೀಂದ್ರ ಪ್ರಭು ಕೂಡ ಅಲ್ಲೇ ನಿಂತಿದ್ದ. ಮಾತಿಗೆ ಮಾತು ಬೆಳೆದು ತನ್ನ ಲೈಸೆನ್ಸ್ ಇರುವ ರಿವಾಲ್ವರನ್ನು ತನ್ನ ಕೆಲಸಗಾರರತ್ತ ಎರಡು ಸುತ್ತು ಹಾರಿಸಿದ್ದಾರೆ. ಅದು ಮಿಸ್ಸಾಗಿ ತನ್ನ ಮಗನ ಮೇಲೆ ಬಿದ್ದಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕೋರ್ಟ್ ಆದೇಶಕ್ಕೆ ತಲೆ ಬಾಗಿ ಬಂದಿದ್ದೇನೆ – ಸುಳ್ಯ ನ್ಯಾಯಾಲಯಕ್ಕೆ ಇಂದು ಡಿಕೆಶಿ ಹಾಜರು

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಸ್ಥಳ ಪರಿಶೀಲನೆ ಮಾಡಿದರು. ನಂತರ ಮಾತನಾಡಿದ ಅವರು, ಆರಂಭಿಕ ಹಂತದಲ್ಲಿ ಮಗನ ಮೇಲೆ ತಂದೆಯಿಂದ ಶೂಟೌಟ್ ಆಗಿದೆ ಎಂಬ ಮಾಹಿತಿ ಇತ್ತು. ಬಳಿಕ ಕೆಲಸಗಾರರು ಫೈರಿಂಗ್ ಮಾಡಿದ್ದಾರೆ ಎಂಬ ಮಾಹಿತಿ ಸಹ ಸಿಕ್ಕಿದೆ. ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಸದ್ಯ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳು ಪರಿಸ್ಥಿತಿ ಗಂಭೀರವಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ತನಿಖೆ ಬಳಿಕ ಅಸಲಿಗೆ ಇಲ್ಲಿ ಏನಾಯಿತು ಎಂಬುದು ಬೆಳಕಿಗೆ ಬರಲಿದೆ.

Comments

Leave a Reply

Your email address will not be published. Required fields are marked *