ದತ್ತಪೀಠದಲ್ಲಿ ಮುಜಾವರ್ ನೇಮಕ ರದ್ದು – ಮತ್ತೆ ಸರ್ಕಾರದ ಅಂಗಳಕ್ಕೆ ಚೆಂಡು

– ಸಂತಸ ಹಂಚಿಕೊಂಡ ಸಿ.ಟಿ ರವಿ

ಚಿಕ್ಕಮಗಳೂರು: ತಾಲೂಕಿನ ದತ್ತಪೀಠದಲ್ಲಿ ಪೂಜೆಗೆ ಮುಸ್ಲಿಂ ಮೌಲ್ವಿ (ಮುಜಾವರ್) ಸೈಯದ್ ಗೌಸ್ ಮೊಹಿನುದ್ದಿನ್‍ರನ್ನ ನೇಮಿಸಿ ಆದೇಶ ಹೊರಡಿಸಿದ್ದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶವನ್ನ ಉಚ್ಛ ನ್ಯಾಯಾಲಯ ರದ್ದುಪಡಿಸಿ ಆದೇಶ ಹೊರಡಿಸಿದೆ. ಹೈಕೋರ್ಟಿನ ಈ ತೀರ್ಪನ್ನ ಹಿಂದೂಪರ ಸಂಘಟನೆಗಳು, ದತ್ತಪೀಠ ಮುಕ್ತಿಯ ಹೋರಾಟದ ಮುನ್ನೆಲೆ ನಾಯಕರು ಇದು ನಮ್ಮ ಮೊದಲ ಗೆಲುವೆಂದೇ ಬಣ್ಣಿಸಿದ್ದಾರೆ.

2018ರಲ್ಲಿ ಜಸ್ಟೀಸ್ ನಾಗಮೋಹನ್ ದಾಸ್ ವರದಿ ಅನ್ವಯ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಮಾಹಿತಿ ಆಧಾರದ ಮೇಲೆ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದತ್ತಪೀಠದಲ್ಲಿ ಪೂಜೆಗೆ ಮುಜಾವರ್ ರನ್ನ ನೇಮಕ ಮಾಡಿತ್ತು. ಸರ್ಕಾರ ಈ ನಡೆ ಹಿಂದೂ ಸಂಘಟನೆಗಳ ಕಣ್ಣನ್ನ ಕೆಂಪಾಗಿಸಿದ್ದರಿಂದ ದತ್ತಪೀಠ ದೇವಸ್ಥಾನ ಸಂವರ್ಧನಾ ಸಮಿತಿ ಹೈಕೋರ್ಟ್ ಮೊರೆ ಹೋಗಿತ್ತು. ಮೂರು ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಇಂದು ಮಾನ್ಯ ಹೈಕೋರ್ಟ್ ಕಾಂಗ್ರೆಸ್ ಸರ್ಕಾರ ನೇಮಕಾತಿಯನ್ನ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ದತ್ತಪೀಠದ ಹೋರಾಟಗಾರರು ಹಾಗೂ ದತ್ತಭಕ್ತರು 2018ರ ಮಾರ್ಚ್ 19ನೇ ರಂದು ಹಿಂದೂಗಳ ಕರಾಳ ದಿನವೆಂದೇ ಬಣ್ಣಿಸಿದ್ದರು. ಏಕೆಂದರೆ ಕಂದಾಯ, ಮುಜರಾಯಿ ಹಾಗೂ ಸಸ್ತಿಕಣವೂ ದತ್ತಾತ್ರೇಯನ ಹೆಸರಲ್ಲೇ ಇದೆ. ಆದರೂ, ಅಂದಿನ ಸಿದ್ದರಾಮಯ್ಯ ಸರ್ಕಾರ ದತ್ತಪೀಠದಲ್ಲಿ ಪೂಜೆಗೆ ಮೌಲ್ವಿಯನ್ನ ನೇಮಿಸಿತ್ತು. ಹಾಗಾಗಿ ದತ್ತಭಕ್ತರು ಈ ದಿನವನ್ನ ಕರಾಳ ದಿನವೆಂದೇ ಕರೆದಿದ್ದರು. ಅಂದು ದತ್ತಪೀಠದ ಪೂಜಾ-ವಿಧಿವಿಧಾನ ಹೈಕೋರ್ಟ್ ಮೇಟ್ಟಿಲೇರಿತ್ತು. ಇಂದು ಮಹತ್ವದ ತೀರ್ಪು ನೀಡಿರುವ ಹೈಕೋರ್ಟ್, ಮುಜರಾಯಿ ಆಯುಕ್ತರ ಹೊರಡಿಸಿದ್ದ ಆದೇಶವನ್ನ ರದ್ದು ಮಾಡಿದೆ. ಕೋರ್ಟ್ ತೀರ್ಪನ್ನ ಹಿಂದೂ ಸಂಘಟನೆಗಳು ಇದು ನಮ್ಮ ಮೊಲದ ಜಯ ಎಂದಿವೆ. ಇದನ್ನೂ ಓದಿ:  ದತ್ತಪೀಠಕ್ಕೆ ಮೌಲ್ವಿ ನೇಮಕ ರದ್ದು

ಇಂದಿನ ತೀರ್ಪೀನ ಬಗ್ಗೆ ಛತ್ತಿಸ್‍ಗಢ ಪ್ರವಾಸದಲ್ಲಿರುವ ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವೀಡಿಯೋ ಮಾಡಿ ಸಂತೋಷ ಹಂಚಿಕೊಂಡಿದ್ದಾರೆ. ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಹೋರಾಟಕ್ಕೆ 3 ತಲೆಮಾರಿನ ಇತಿಹಾಸವಿದೆ. ಎಲ್ಲಾ ದಾಖಲೆಗಳು ದತ್ತಾತ್ರೇಯನ ಹೆಸರಲ್ಲೇ ಇದೆ. ಹಿಂದೂ ಅರ್ಚಕರಿಲ್ಲದಿರೋದು ಅನ್ಯಾಯ. ಈ ಅನ್ಯಾಯವನ್ನ ಸರಿಪಡಿಸುವ ದಾಖಲೆಯನ್ನ ಮುಜರಾಯಿ ಸಚಿವರು ನೀಡಿದ್ದರು. ಆದರೆ, ಸಿದ್ದರಾಮಯ್ಯ ಸರ್ಕಾರ ನ್ಯಾಯಕ್ಕೆ ವಿರುದ್ಧವಾಗಿ ಅನ್ಯಾಯ ಮಾಡಿತ್ತು. ಸತ್ಯಕ್ಕೆ ವಿರುದ್ಧವಾಗಿ ಸುಳ್ಳಿನ ಸರಪಳಿ ಹೆಣೆದು ಹಿಂದೂಗಳಿಗೆ ಅನ್ಯಾಯ ಮಾಡಿತ್ತು. ಈಗ ನ್ಯಾಯಾಲಯ ಮತ್ತೆ ರಾಜ್ಯ ಸರ್ಕಾರದ ಅಂಗಳಕ್ಕೆ ಮುಜರಾಯಿ ಆಯುಕ್ತರ ವರದಿಯನ್ನ ಆಧರಿಸಿ ಕ್ರಮ ಕೈಗೊಳ್ಳುವ ಆದೇಶ ನೀಡಿದೆ. ಹಿಂದೂ ಅರ್ಚಕರ ನೇಮಕವಾಗುವ ವಿಶ್ವಾಸವಿದೆ ಎಂದಿದ್ದಾರೆ.

ದತ್ತಪೀಠ ಹೋರಾಟದ ಮುನ್ನೆಲೆ ನಾಯಕ ಶೃಂಗೇರಿ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಡಿ.ಎನ್.ಜೀವರಾಜ್ ಕೂಡ ಇಂದಿನ ಹೈಕೋರ್ಟ್ ತೀರ್ಪನ್ನ ಸ್ವಾಗತಿಸಿ, ಸಂಭ್ರಮಿಸಿದ್ದಾರೆ. ಇದು 35 ವರ್ಷಗಳಿಂದ ಧರ್ಮದ ಪರ ನಡೆಯುತ್ತಿರುವ ಹೋರಾಟ. ದತ್ತಾತ್ರೇಯರ ಪಾದುಕೆಗಳಿಗೆ, ಅನುಸೂಯ ದೇವಿಗೆ ಹಿಂದೂ ಅರ್ಚಕರಿಂದ ಪೂಜೆ ಆಗುತ್ತೆ ಅನ್ನೋದು ನಮ್ಮೆಲ್ಲರ ಭಾವನೆ ಹಾಗೂ ಧರ್ಮಕ್ಕೆ ಸಿಕ್ಕಂತಹ ನಮ್ಮ ಮೊದಲ ಜಯ. ಈ ಹೋರಾಟ ಇಷ್ಟಕ್ಕೆ ನಿಲ್ಲಲ್ಲ. ದತ್ತಪೀಠ ಪೂರ್ಣ ಪ್ರಮಾಣದಲ್ಲಿ ಹಿಂದೂಗಳ ಪೀಠ ಆಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತೆ. ಮುಂದಿನ ದಿನಗಳಲ್ಲಿ ಸುಪ್ರೀಂಕೋರ್ಟಿನಲ್ಲೂ ಕೂಡ ನಮ್ಮ ಪರವಾದ ತೀರ್ಪು ಬರುತ್ತೆ ಎಂಬ ನಂಬಿಕೆ ಇದೆ. ಯಾಕಂದ್ರೆ ಅದು ವಾಸ್ತವಿಕ ಹಿಂದೂಗಳ ಶ್ರದ್ಧಾ ಕೇಂದ್ರ. ಆ ತೀರ್ಪು ಬೇಗ ಬರಲಿ ಅನ್ನೋ ನಮ್ಮ ಬಯಕೆ ಎಂದು ನ್ಯಾಯಾಲಯದ ತೀರ್ಪನ್ನ ಸ್ವಾಗತಿಸಿದ್ದಾರೆ.

ಹೈಕೋರ್ಟಿನ ಇಂದಿನ ಈ ತೀರ್ಪು ದತ್ತಪೀಠದ ಮುಕ್ತಿಗಾಗಿ ಹೋರಾಡ್ತಿರೋರು ನಮ್ಮ ಮೊದಲ ಜಯ ಅಂತಿದ್ದಾರೆ. ಆದರೆ ದತ್ತಪೀಠದ ದತ್ತಾತ್ರೇಯ ಸ್ವಾಮಿ ಕ್ಷೇತ್ರ ಎಷ್ಟು ಧಾರ್ಮಿಕ ಕ್ಷೇತ್ರವೋ ರಾಜಕೀಯಕ್ಕೂ ಅಷ್ಟೆ ಬಳಕೆಯಾಗಿರುವುದರ ಬಗ್ಗೆ ಹಿಂದೂಗಳು, ಹಿಂದೂ ಸಂಘಟಕರಿಗೆ ಬೇಸರವಿದೆ. ಅದರ ಹೊರತಾಗಿಯೂ ಹೋರಾಟ ನಿರಂತರವಾಗಿದೆ. ಹಿಂದೂ-ಮುಸ್ಲಿಂ ಎರಡೂ ಸಮುದಾಯದವರು ಇನಾಂ ದತ್ತಾತ್ರೇಯ ಬಾಬಾಬುಡನ್‍ಗಿರಿ ದರ್ಗಾ ನಮಗೆ ಸೇರಬೇಕೆಂದು ಹೇಳುತ್ತಿದ್ದಾರೆ. ಹೋರಾಟ ನಡೆಸುತ್ತಲೇ ಇದ್ದಾರೆ. ಆದರೆ ಅಂತಿಮವಾಗಿ ಯಾರಿಗೆ ಸೇರುತ್ತೋ ಗೊತ್ತಿಲ್ಲ. ಯಾರಿಗೆ ಸೇರಿದರೂ ಕೂಲ್ ಸಿಟಿ ಕಾಫಿನಾಡು ಕೂಲಾಗೇ ಇರಲಿ ಅನ್ನೋದು ಜಿಲ್ಲೆಯ ಜನರ ಬಯಕೆ.

Comments

Leave a Reply

Your email address will not be published. Required fields are marked *