ಮೆಟ್ರೋ 3ನೇ ಹಂತಕ್ಕೆ ಶೀಘ್ರ ಚಾಲನೆ: ಮುಖ್ಯಮಂತ್ರಿ ಸೂಚನೆ

ಬೆಂಗಳೂರು: ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲು ನೀಡಲಾಗಿದ್ದ 2025ರ ಗಡುವನ್ನು ಮಾರ್ಪಡಿಸಿ, 2024ಕ್ಕೆ ನಿಗದಿ ಪಡಿಸುವಂತೆ ಹಾಗೂ ಇದಕ್ಕೆ ತಕ್ಕ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದು ಪೂರ್ಣಗೊಳ್ಳುತ್ತಿದ್ದಂತೆಯೇ ಮೂರನೇ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಅವರು ಇಂದು ಮೆಟ್ರೋ 2ನೇ ಹಂತದ ಯೋಜನೆಯಡಿ ಕಂಟೋನ್ಮೆಂಟ್ ನಿಂದ ಶಿವಾಜಿನಗರ ನಿಲ್ದಾಣದವರೆಗೆ ಸುರಂಗ ಮಾರ್ಗ ಕೊರೆದ ಟಿಬಿಎಂ ಊರ್ಜಾ ಯಂತ್ರವು ಹೊರಗೆ ಬರುವುದನ್ನು ವೀಕ್ಷಿಸಿದ ನಂತರ ಮಾತನಾಡುತ್ತಿದ್ದರು. ಇದನ್ನೂ ಓದಿ: ಫೋಟೋ ಪಾಲಿಟಿಕ್ಸ್-ಮೋದಿ ಭಾವಚಿತ್ರ ಅಳವಡಿಕೆಗೆ ಜೆಡಿಎಸ್ ವಿರೋಧ

ಎರಡನೇ ಹಂತ 2024ಕ್ಕೇ ಮುಗಿಸಲು, ಯೋಜನೆ ರೂಪಿಸಿ, ಹೆಚ್ಚುವರಿ ಮಾನವಸಂಪನ್ಮೂಲ ಬಳಸಿಕೊಂಡು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಇನ್ನು 21 ಕಿ.ಮೀ. ಆಗಬೇಕಾಗಿದೆ. ಇದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆಮೇಲೆ ಮೂರನೇ ಹಂತ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಪಂಚೆ ಕಳಚಿದೆ ಅಂತ ಸಿದ್ದರಾಮಯ್ಯನವರ ಕಿವಿಯಲ್ಲಿ ಹೇಳಿದ್ರು ಡಿಕೆಶಿ!

ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಮೆಟ್ರೋ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಬೇಕಾಗಿದೆ. ಮೆಟ್ರೋ 2ನೇಹಂತ ಪೂರ್ಣಗೊಂಡಾಗ 56 ಕಿ.ಮೀ. ಮಾರ್ಗ ಪೂರ್ಣಗೊಳ್ಳುವುದು. ಇದರೊಂದಿಗೆ 3ನೇ ಹಂತ ಕೈಗೆತ್ತಿಕೊಳ್ಳುತ್ತಿದ್ದೇವೆ. ಮೂರೂ ಹಂತಗಳು ಪೂರ್ಣಗೊಂಡಾಗ ಮೆಟ್ರೋ ರೈಲು ಬೆಂಗಳೂರಿನ ಜೀವನಾಡಿಯಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನ ಅಪಾರ್ಟ್‍ಮೆಂಟ್‍ನಲ್ಲಿ ಸ್ಫೋಟಕ್ಕೆ ಕಾರಣ ಫ್ರಿಡ್ಜ್?

ಮೆಟ್ರೋ ಕಾಮಗಾರಿಯನ್ನು ಹಲವು ಸವಾಲುಗಳ ನಡುವೆಯೂ ವೈಜ್ಞಾನಿಕವಾಗಿ, ಸುರಕ್ಷತೆಗೆ ಆದ್ಯತೆ ನೀಡಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮೊದಲ ಹಂತದಲ್ಲಿ ಹಲವು ಸವಾಲುಗಳು ಎದುರಾಗಿದ್ದವು. ಮೆಜೆಸ್ಟಿಕ ಬಳಿ ಟನೆಲ್ ಬೋರಿಂಗ್ ಮಷಿನ್ ಸಿಲುಕಿಕೊಂಡಿತ್ತು ಎಂದು ಅವರು ಸ್ಮರಿಸಿಕೊಂಡರು. ಇಂದು ಅತ್ಯುತ್ತಮ ಟಿಬಿಎಂ ಊರ್ಜಾ ಮೂಲಕ ಕಾರ್ಯ ನಿರ್ವಹಿಸಲಾಗುತ್ತಿದೆ. 855 ಮೀಟರ್ ಸುರಂಗ ಕೊರೆಯಲಾಗಿದೆ.

ಮೆಟ್ರೋ ಯೋಜನೆಗೆ ಜನರು ಸಹಕಾರ ನೀಡಿದ್ದಾರೆ. ಬೆಂಗಳೂರು ನಗರದ ಎಲ್ಲ ದಿಕ್ಕಿನಲ್ಲಿ ಮೆಟ್ರೋ ವಿಸ್ತರಿಸಲು ಸಹಕಾರ ನೀಡಿದ ಜನತೆಗೆ ಧನ್ಯವಾದ ಸಲ್ಲಿಸಿದ ಮುಖ್ಯಮಂತ್ರಿಗಳು. ವಿಮಾನ ನಿಲ್ದಾಣದ ವರೆಗೆ ಮೆಟ್ರೋ ವಿಸ್ತರಣೆಗೆ ಶೀಘ್ರವೇ ಚಾಲನೆ ನೀಡಲಾಗುವುದು. ಕೇಂದ್ರದಿಂದ ಉತ್ತಮ ಸಹಕಾರ ಹಾಗೂ ಹಣಕಾಸಿನ ನೆರವು ದೊರೆಯುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಉಮೇಶ್ ಕತ್ತಿ, ಎಸ್ ಟಿ ಸೋಮಶೇಖರ್, ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ, ಸಂಸದ ಪಿ ಸಿ ಮೋಹನ್, ಶಾಸಕರಾದ ರಿಜ್ವಾನ್ ಅರ್ಷದ್, ಲೆಹರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *