ಕಾರವಾರದ ಕಡಲ ತೀರದಲ್ಲಿ ಅಪರೂಪದ ಟೈಗರ್ ಶಾರ್ಕ್ ಕಳೇಬರ ಪತ್ತೆ

ಕಾರವಾರ: ಕಡಲ ತೀರದಲ್ಲಿ ಕಳೆದ ಒಂದು ತಿಂಗಳಿಂದ ಅಪರೂಪದ ಕಡಲ ಜೀವಿಗಳ ಕಳೇಬರ ಪತ್ತೆಯಾಗುತ್ತಿದೆ. ಈ ಹಿಂದೆ ಡಾಲ್ಫಿನ್, ಅಪರೂಪದ ಸಮುದ್ರ ಆಮೆಗಳ ಕಳೇಬರ ಪತ್ತೆಯಾಗಿದ್ದವು. ಇದೀಗ ಕಾರವಾರ ತಾಲೂಕಿನ ಮಾಜಾಳಿ ಕಡಲತೀರದಲ್ಲಿ ಅಳಿವಿನಂಚಿನಲ್ಲಿರುವ ಟೈಗರ್ ಶಾರ್ಕ್ ಹೆಣ್ಣು ಮೀನಿನ ಕಳೇಬರ ಕಂಡುಬಂದಿದೆ.

ಈ ಶಾರ್ಕ್ ಮೀನಿನ ಕಳೇಬರವು ಒಂದೂವರೆ ಮೀಟರ್ ಉದ್ದವಿದ್ದು, ಮೂವತ್ತು ಕೆಜಿ ಭಾರವಿದೆ. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಡಲ ಜೀವಶಾಸ್ತ್ರಜ್ಞರು ಇದರ ಕಳೇಬರವನ್ನು ಪರೀಕ್ಷಿಸಿದ್ದಾರೆ. ವಿಶ್ವದಾದ್ಯಂತ ಆಳಸಮುದ್ರದಲ್ಲಿ ಕಂಡುಬರುವ ಪ್ರಭೇದ ಇದಾಗಿದ್ದು, ಹುಲಿಯ ಚರ್ಮದಲ್ಲಿರುವಂಥ ಪಟ್ಟೆಗಳನ್ನು ಹೊಂದಿದೆ. ಹೀಗಾಗಿ ಈ ಮೀನಿಗೆ ಟೈಗರ್ ಶಾರ್ಕ್ ಎಂಬ ಹೆಸರು ಬಂದಿದೆ. ಇದನ್ನೂ ಓದಿ: ಕುಮಟಾದಲ್ಲಿ ಇಂಡೋ ಪೆಸಿಫಿಕ್ ಹಂಪ್‍ಬ್ಯಾಕ್ ಡಾಲ್ಫಿನ್ ಕಳೇಬರ ಪತ್ತೆ

ವಿಶ್ವದಲ್ಲಿ ಇರುವ ಶಾರ್ಕ್‍ಗಳ ಜಾತಿಯಲ್ಲಿ ನಾಲ್ಕನೇ ಅತೀ ದೊಡ್ಡದು ಎಂದು ಗುರುತಿಸಲಾಗಿದೆ. ಸುಮಾರು 40 ವರ್ಷಗಳ ಜೀವಿತಾವಧಿ ಹೊಂದಿದ್ದು, ಐದು ಮೀಟರ್‍ ಗಳಷ್ಟು ಉದ್ದ ಬೆಳೆಯುತ್ತವೆ. 300ರಿಂದ 600 ಕೆ.ಜಿ.ಗಳಷ್ಟು ತೂಕವಿರುತ್ತವೆ. ಟೈಗರ್ ಶಾರ್ಕ್‍ಗಳ ಹಲ್ಲುಗಳು ಬಲಿಷ್ಠವಾಗಿದ್ದು ಕವಚ ಹೊಂದಿದ ಆಮೆಗಳ ಚಿಪ್ಪನ್ನೆ ತುಂಡರಿಸಿ ತಿನ್ನುತ್ತವೆ. ಇವುಗಳು ಬಹಳ ಆಕ್ರಮಣಕಾರಿ ಸ್ವಭಾವ ಹೊಂದಿರುತ್ತದೆ. ಹೆಚ್ಚಾಗಿ ತಿಮಿಂಗಿಲಗಳು, ಇತರ ಶಾರ್ಕ್‍ಗಳು, ಮಣಕಿ, ಬೊಂಡಾಸ್ ಮೀನುಗಳು, ಆಮೆಗಳು, ಮನುಷ್ಯರ ಮೇಲೂ ದಾಳಿ ಮಾಡುತ್ತವೆ.  ಇದನ್ನೂ ಓದಿ: ಕಾರವಾರ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೇಬರ ಪತ್ತೆ

ಶಾರ್ಕ್ ಮೀನಿನ ಬಗ್ಗೆ ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಮಾಹಿತಿ ನೀಡಿದ್ದು, ನಮ್ಮ ದೇಶದಲ್ಲಿ ಇವುಗಳನ್ನು ಆಹಾರಕ್ಕಾಗಿ ಬಳಸುವುದಿಲ್ಲ. ಈ ಮೀನು ಮೀನುಗಾರರ ಬಲೆಗೆ ಬಿದ್ದಿದ್ದು, ಇವುಗಳನ್ನು ಇಲ್ಲಿ ಬಳಸದ ಕಾರಣ ಈ ಶಾರ್ಕ್‍ನ್ನು ಹಾಗೆಯೇ ಬಿಟ್ಟು ಹೋಗಿರುವ ಸಾಧ್ಯತೆ ಇದೆ. ಪರಿಸರ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟವು ಈ ಶಾರ್ಕ್‍ಗಳನ್ನು ಅಳಿವಿನ ಅಂಚಿನಲ್ಲಿದೆ ಎಂದು ಗುರುತಿಸಿದೆ. ಆದರೆ ನಮ್ಮ ದೇಶದ ಕಾನೂನಿನಲ್ಲಿ ಇವುಗಳ ಬೇಟೆಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಮಾಹಿತಿ ಹಂಚಿಕೊಂಡರು.

 

Comments

Leave a Reply

Your email address will not be published. Required fields are marked *