46 ವರ್ಷದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆ

ನವದೆಹಲಿ: ಈ ಬಾರಿಯ ಮಾನ್ಸೂನ್ ಮಳೆ ರಾಷ್ಟ್ರ ರಾಜಧಾನಿ ದೆಹಲಿಗೆ ವಿಶೇಷವಾಗಿದ್ದು, 46 ವರ್ಷದ ಬಳಿಕ ದಾಖಲೆಯ ಮಳೆ ಸುರಿದಿದೆ. ಮಾನ್ಸೂನ್ ನಲ್ಲಿ ಆರೇಳು ಬಾರಿ ಲಘು ಪ್ರಮಾಣಕ್ಕೆ ಸೀಮಿತವಾಗುತ್ತಿದ್ದ ಮಳೆ, ಈ ಬಾರಿ ನಿರಂತರವಾಗಿ ಸುರಿಯುತ್ತಿದ್ದು ರಾಷ್ಟ್ರ ರಾಜಧಾನಿಯನ್ನು ತಂಪು ಮಾಡಿದೆ.

ಇಂದು ಬೆಳಗ್ಗೆ 5:30ರಿಂದ ಆರಂಭವಾದ ಮಳೆ ಇನ್ನೂ ಸುರಿಯುತ್ತಿದೆ. ಮತ್ತಷ್ಟು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಈವರೆಗೂ ದೆಹಲಿಯಲ್ಲಿ 1,100 ಮಿಲಿ ಮೀಟರ್ ಮಳೆ ದಾಖಲಾಗಿದೆ. 2003ರಲ್ಲಿ 1050 ಮಿಲಿ ಮೀಟರ್ ಮಳೆ ದಾಖಲಾಗಿತ್ತು. 1975ರಲ್ಲಿ 1150 ಮಿಲಿ ಮೀಟರ್ ಮಳೆಯಾಗಿರುವುದು ಈವರೆಗಿನ ದಾಖಲೆಯಾಗಿದೆ. 1975 ಹೊರತುಪಡಿಸಿದರೆ ಈ ಬಾರಿಯ ಮಳೆ ಹೊಸ ದಾಖಲೆ ಸೃಷ್ಟಿಸಿದೆ.

ಇಂದು ಬೆಳಗ್ಗೆ 5.30 ರಿಂದ 8.30 ರ ನಡುವೆ, ಸಫ್ದರ್‍ಜಂಗ್ ಹವಾಮಾನ ಕೇಂದ್ರವು 81.3 ಮಿಮೀ, ಪಾಲಂ ವೀಕ್ಷಣಾಲಯದಲ್ಲಿ 98 ಮಿಮೀ ಮಳೆಯಾಗಿದೆ. ಶುಕ್ರವಾರ ಬೆಳಗ್ಗೆ 8.30 ರಿಂದ ಶನಿವಾರ ಬೆಳಗ್ಗೆ 8.30 ರ ನಡುವೆ ಸಫ್ದರ್‍ಜಂಗ್‍ನಲ್ಲಿ ಒಟ್ಟು 94.7 ಮಿಮೀ ದಾಖಲಾಗಿದೆ, ಪಾಲಂ ಅತಿ ಹೆಚ್ಚು ಪ್ರಮಾಣದ ಅಂದರೆ 103.3 ಮಿಮೀ ಮಳೆಯಾಗಿದೆ. ಸೆಪ್ಟೆಂಬರ್12 ರಿಂದ 17 ವರೆಗೂ ದೆಹಲಿಯಲ್ಲಿ ನಿರಂತರ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ.

ದೆಹಲಿಯಲ್ಲಿ ಸುರಿಯುತ್ತಿರುವ ಮಳೆಯಿಂದ ವಾಹನ ಸವಾರರು ಪರದಾಡುವಂತಾಯಿತು. ರಸ್ತೆಯ ಮೇಲೆ ನೀರು ನುಗ್ಗಿದ ಪರಿಣಾಮ ವಾಹನ ದಟ್ಟನೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಕೂಡಾ ಆಗಿದೆ. ಟ್ರಾಫಿಕ್ ನಿಧಾನಗತಿಯಲ್ಲಿದ್ದು ಬೈಕ್ ಸವಾರರು ಹೈರಣಾಗಿದ್ದಾರೆ. ಇದನ್ನೂ ಓದಿ: ಮುಂಬೈ ಅತ್ಯಾಚಾರ ಪ್ರಕರಣ- ಚಿಕಿತ್ಸೆ ಫಲಿಸದೆ ಮೃತಪಟ್ಟ ಸಂತ್ರಸ್ತೆ

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಮಳೆಯ ನೀರು ನುಗ್ಗಿದ್ದು, ರನ್ ವೇ ನೀರು ಹರಿಯುತ್ತಿದೆ. ಈ ಹಿನ್ನೆಲೆ ನಾಲ್ಕು ಪ್ರಾದೇಶಿಕ ವಿಮಾನಗಳು ಸೇರಿ ಒಂದು ಅಂತಾರಾಷ್ಟ್ರೀಯ ವಿಮಾನವನ್ನು ಜೈಪುರ್ ಮತ್ತು ಅಹ್ಮದಾಬಾದ್ ಕಡೆಗೆ ಮಾರ್ಗ ಬದಲಾಯಿಸಲಾಗಿದೆ. ರನ್ ವೇ ಮೇಲಿರುವ ನೀರು ತೆರವು ಕಾರ್ಯ ನಡೆಯುತ್ತಿದೆ.

Comments

Leave a Reply

Your email address will not be published. Required fields are marked *