ಪಾಪದ ಪ್ರಾಯಶ್ಚಿತಕ್ಕೆ ಶಶಿಕಲಾ ಜೊಲ್ಲೆಗೆ ಮೊಟ್ಟೆ ಖಾತೆ ಬಿಟ್ಟು, ದೇವರ ಖಾತೆ: ಸತೀಶ್ ಜಾರಕಿಹೊಳಿ ಲೇವಡಿ

ಬೆಳಗಾವಿ: ಶಶಿಕಲಾ ಜೊಲ್ಲೆ ಅವರಿಗೆ ಮೊಟ್ಟೆ ಖಾತೆ ಬಿಟ್ಟು ಜಪ ಮಾಡುವಂತೆ ದೇವರ ಖಾತೆ ಕೊಟ್ಟಿದ್ದಾರೆ. ಅವರು ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲು ಈ ಖಾತೆ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.

ನಗರದಲ್ಲಿ ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೊಟ್ಟೆ ಖಾತೆ ನೀಡದೇ ಇರುವುದು ಒಳ್ಳೆಯ ಸಂಗತಿ, ಬೇರೆ ಖಾತೆ ಕೊಟ್ಟಿದ್ದಾರೆ. ದೇವರ ಜಪ ಮಾಡಲಿ, ಅಲ್ಲಿ ಮಾಡಿದ ತಪ್ಪನ್ನು ಪ್ರಾಯಶ್ಚಿತ ಮಾಡಿಕೊಳ್ಳಲು, ಪೂಜೆ ಮಾಡಿಸಲು ಮುಜರಾಯಿ ಖಾತೆ ಕೊಟ್ಟಿದ್ದಾರೆ. ಮುಜರಾಯಿ ಖಾತೆ ಶಶಿಕಲಾ ಜೊಲ್ಲೆ ಅವರಿಗೆ ಕೊಟ್ಟಿದ್ದು ಒಂದು ರೀತಿಯ ಶಿಕ್ಷೆ ಆಗಿದೆ ಎಂದು ಲೇವಡಿ ಮಾಡಿದರು.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಸಂಬಂಧ ಮಾತನಾಡಿದ ಸತೀಶ ಜಾರಕಿಹೊಳಿ, ಆಗಸ್ಟ್ 16ರಂದು ಕಮಿಟಿ ಬರುತ್ತಿದ್ದು. ಬೆಳಗ್ಗೆ 11 ಗಂಟೆಗೆ ಸಭೆಯಿದೆ. ಅಂದೇ ನಾಮಿನೇಶನ್ ಕೂಡ ಆರಂಭವಾಗುತ್ತಿದೆ. ಈಗಾಗಲೇ ಅಭ್ಯರ್ಥಿಗಳು ಕೂಡ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಪಕ್ಷದಿಂದ, ವೈಯಕ್ತಿಕವಾಗಿ ಸ್ಪರ್ಧಿಸುವ ಕುರಿತು ಕಮಿಟಿ ಬಂದು ಹೋದ ನಂತರ ಗೊತ್ತಾಗುತ್ತದೆ ಎಂದು ಹೇಳಿದರು.

ಆಮ್ ಆದ್ಮಿ ಬೇರೆ, ನಮ್ಮ ಪಕ್ಷ ಬೇರೆ. ಹೀಗಾಗಿ ಬೇರೆ ಯಾವುದೇ ಪಕ್ಷಗಳ ಜೊತೆಗೆ ಹೊಂದಾಣಿಕೆ ಪ್ರಶ್ನೆಯೇ ಬರುವುದಿಲ್ಲ. ಅಭಿವೃದ್ಧಿ ವಿಷಯದಲ್ಲಿ ಹೇಳಲು ಕಾಂಗ್ರೆಸ್ ಪಕ್ಷದಲ್ಲಿ ಬಹಳಷ್ಟು ವಿಷಯಗಳಿವೆ. ಈಗಾಗಲೇ ಶೇ.50ರಷ್ಟು ರಿಸರ್ವ್ ಇದೆ. ವಾರ್ಡ್ ನಲ್ಲಿ ಯಾರು ಜನಪ್ರಿಯ ಇರುತ್ತಾರೆ, ಗೆಲ್ಲುವ ಶಕ್ತಿ ಇರುತ್ತದೆ ಅಂತವರಿಗೆ ಟಿಕೆಟ್ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಬೊಮ್ಮಾಯಿ ಅವರು ಸಿಎಂ ಆಗಿ 15 ದಿನಗಳಾಗಿವೆ. ಹೀಗಾಗಿ ಸಂತ್ರಸ್ತರಿಗೆ ಪರಿಹಾರ ನೀಡಲು ಸ್ವಲ್ಪ ಕಾಲಾವಕಾಶ ನೀಡಬೇಕಾಗುತ್ತದೆ. ಸರ್ವೇ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಕೆಲವು ಕಡೆ ಈಗ ಆರಂಭವಾಗಿದೆ. ವಿದ್ಯುತ್, ರಸ್ತೆ, ಶಾಲಾ ದುರಸ್ಥಿ ಕಾರ್ಯ ತುರ್ತಾಗಿ ಆಗಬೇಕಿದೆ ಎಂದು ಇದೇ ವೇಳೆ ಸರ್ಕಾರಕ್ಕೆ ಸತೀಶ ಜಾರಕಿಹೊಳಿ ಸಲಹೆ ನೀಡಿದರು.

Comments

Leave a Reply

Your email address will not be published. Required fields are marked *