ಟ್ವಿಟ್ಟರ್‌ ಖಾತೆ ಮತ್ತೆ ಸಕ್ರಿಯ – ಸತ್ಯಮೇವ ಜಯತೇ ಎಂದ ಕಾಂಗ್ರೆಸ್‌

ನವದೆಹಲಿ: ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ ಮತ್ತೆ ಸಕ್ರಿಯಗೊಂಡಿದೆ.

ಅತ್ಯಾಚಾರಕ್ಕೀಡಾಗಿ ಕೊಲೆಯಾದ 9 ವರ್ಷದ ಬಾಲಕಿಯ ಕುಟುಂಬಸ್ಥರ ಫೋಟೋವನ್ನು ಶೇರ್ ಮಾಡಿ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣ ನೀಡಿ ರಾಹುಲ್ ಗಾಂಧಿಯವರ ಟ್ವಿಟ್ಟರ್ ಖಾತೆಯನ್ನು ಕಳೆದ ವಾರ ಬ್ಲಾಕ್ ಮಾಡಿತ್ತು. ಇದಾದ ಬಳಿಕ ಈಗ ಪಕ್ಷದ ಖಾತೆಯ ಜೊತೆಗೆ ಹಲವು ನಾಯಕರ ಮತ್ತು ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿತ್ತು.

ಇಂದು ಕಾಂಗ್ರೆಸ್‌ ಪಕ್ಷದ ಟ್ವಿಟ್ಟರ್‌ ಖಾತೆ ಸಕ್ರಿಯಗೊಂಡಿದ್ದು, ಸತ್ಯಮೇವ ಜಯತೇ ಎಂದು ಬರೆದು ಟ್ವೀಟ್‌ ಮಾಡಿದೆ. ಎಲ್ಲ ಕಾಂಗ್ರೆಸ್‌ ಖಾತೆಯಗಳು ಅನ್‌ಲಾಕ್‌ ಆಗಿದೆ. ಅನ್‌ಲಾಕ್‌ ಆಗಲು ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ ಎಂದು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥ ರೋಹನ್ ಗುಪ್ತ ತಿಳಿಸಿದ್ದಾರೆ.

ಶನಿವಾರ ರಾಹುಲ್‌ ಗಾಂಧಿ ಟ್ವಿಟ್ಟರ್‌ ವಿರುದ್ಧ ಕಿಡಿ ಕಾರಿದ್ದರು. ‌ ಇದು ನಮ್ಮ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ನಮಗೆ ಸಂಸತ್‍ನಲ್ಲಿ ಮಾತನಾಡಲು ಅವಕಾಶ ಕೊಟ್ಟಿಲ್ಲ. ಭರವಸೆ ಬೆಳಕಾಗಿ ಟ್ವಿಟ್ಟರ್ ಇದೆ ಎಂದು ಭಾವಿಸಿದ್ದೆ. ಆದರೆ ಟ್ವಿಟ್ಟರ್ ಆ ರೀತಿ ಇಲ್ಲ. ಸರ್ಕಾರದ ಪರವಾಗಿ ಟ್ವಿಟ್ಟರ್‌ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದ್ದರು.

ಯಾರೆಲ್ಲ ಖಾತೆ ಬ್ಲಾಕ್ ಆಗಿತ್ತು?
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಕೆ ಸಿ ವೇಣುಗೋಪಾಲ್, ಅಜಯ್ ಮಕೇನ್, ಪಕ್ಷದ ಸಚೇತಕ ಮಣಿಕ್ಕಮ್ ಠಾಕೋರ್, ಅಸ್ಸಾಂ ಕಾಂಗ್ರೆಸ್ ಉಸ್ತುವಾರಿ ಮತ್ತು ಕೇಂದ್ರದ ಮಾಜಿ ಸಚಿವ ಜಿತೇಂದ್ರ ಸಿಂಗ್ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಅವರ ಟ್ವಿಟ್ಟರ್ ಖಾತೆಗಳನ್ನು ಸಹ ಬ್ಲಾಕ್ ಮಾಡಲಾಗಿತ್ತು.

ಕಳೆದ ವಾರ ರಾಹುಲ್ ಗಾಂಧಿ 9 ವರ್ಷದ ಅತ್ಯಾಚಾರಕ್ಕೀಡಾಗಿ ಹತ್ಯೆಗೀಡಾದ ಬಾಲಕಿಯ ಕುಟುಂಬಸ್ಥರ ಫೋಟೋವನ್ನು ಪ್ರಕಟಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ಟ್ವಿಟ್ಟರ್ ಸಂಸ್ಥೆಗೆ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿತ್ತು. ಈ ದೂರಿನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರ ಖಾತೆಯನ್ನು ಬ್ಲಾಕ್ ಮಾಡಲಾಗಿತ್ತು. ಇದನ್ನೂ ಓದಿ: ವಾಜಪೇಯಿ ಹೆವೀ ಡ್ರಿಂಕರ್ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

ಭಾರತದಲ್ಲಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರ ಫೋಟೋ, ಹೆಸರು, ಪೋಷಕರ ಫೋಟೋಗಳನ್ನು ಪ್ರಕಟಿಸುವಂತಿಲ್ಲ. ಇದು ಕಾನೂನಿನ ಉಲ್ಲಂಘನೆ. 2018ರಲ್ಲಿ ಜಮ್ಮು ಕಾಶ್ಮೀರ ಕಥುವಾದ 8 ವರ್ಷದ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಗುರುತನ್ನು ಮಾಧ್ಯಮ ಸಂಸ್ಥೆಗಳು ಪ್ರಕಟಿಸಿತ್ತು.

ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಡ ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಿ 12 ಮಾಧ್ಯಮ ಸಂಸ್ಥೆಗಳಿಗೆ ತಲಾ 10 ಲಕ್ಷ ರೂ. ದಂಡವನ್ನು ವಿಧಿಸಿತ್ತು.

Comments

Leave a Reply

Your email address will not be published. Required fields are marked *