ಪ್ರವಾಸದ ಹೆಸರಲ್ಲಿ ದರೋಡೆ – 8 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಹುಬ್ಬಳ್ಳಿ: ಮಾಗೋಡು ಜಲಪಾತ ಪ್ರವಾಸಕ್ಕೆ ಹೋಗುವ ನೆಪದಲ್ಲಿ ಕಾರು ಬಾಡಿಗೆ ಪಡೆದು, ಚಾಲಕನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರ್ಸ್, ಮೊಬೈಲ್, ವಾಹನ ದೋಚಿಕೊಂಡು ಹೋಗಿದ್ದ ಮೂವರಿಗೆ ಹುಬ್ಬಳ್ಳಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 8 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 20,000 ರೂ. ದಂಡ ವಿಧಿಸಿದೆ.

ಪ್ರವಾಸದ ನೆಪದಲ್ಲಿ ಅಹ್ಮದ್ ಪಣಿಬಂದ, ಅವಿನಾಶ್ ಪವಾರ, ಮಂಜುನಾರ್ ಪವಾರ ಎಂಬವರು ಗಿರಣಿಚಾಳ ನಿವಾಸಿ ಗಣೇಶ ಜುಮ್ಹಾಪುರ 2014ರ ಜುಲೈ 5ರಂದು ಚನ್ನಮ್ಮ ವೃತ್ತದ ಬಳಿ ಇದ್ಗಾ ಮೈದಾನದಲ್ಲಿ ಬಾಡಿಗೆ ಕಾರು ನಿಲ್ಲಿಸಿದ್ದರು. ಈ ವೇಳೆ ಓರ್ವ ಯುವತಿಯೊಂದಿಗೆ ಬಂದ ಸಿರಾಜ್ ಪಣಿಬಂದ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಜಲಪಾತಕ್ಕೆ ತೆರಳಲು ಬಾಡಿಗೆಗೆ ಮಾತನಾಡಿದ್ದನು. ಬಳಿಕ ಇಬ್ಬರೂ ಕಾರಿನಲ್ಲಿ ಹೊರಟಿದ್ದರು. ಮಾರ್ಗ ಮಧ್ಯ ಹಳೇ ಹುಬ್ಬಳ್ಳಿ ಶಿಮ್ಲಾ ನಗರದ ಬಳಿ ಸಿರಾಜ್ ತನ್ನ ಸಹಚರರಾದ ಅವಿನಾಶ್ ಪವಾರ, ಮಂಜುನಾಥ್ ಪವಾರ ಹಾಗೂ ಓರ್ವ ನನ್ನು ಹತ್ತಿಸಿಕೊಂಡಿದ್ದನು.

ಮಾಗೋಡು ಫಾಲ್ಸ್ 10 ಕಿ.ಮೀ. ದೂರ ಇದ್ದಾಗ ಕಾರು ನಿಲ್ಲಿಸಲು ಸೂಚಿಸಿದ್ದರು. ಕಾರು ನಿಲ್ಲಿಸುತ್ತಿದ್ದಂತೆ ಚಾಲಕ ಗಣೇಶನ ಮೇಲೆ ಹಲ್ಲೆ ನಡೆಸಿ, ಕೈಕಾಲುಗಳನ್ನು ಕಟ್ಟಿ ಹಿಂದಿನ ಸೀಟಿನಲ್ಲಿ ಹಾಕಿದ್ದರು. ಬಳಿಕ ಕಾರು ಚಲಾಯಿಸಿಕೊಂಡು ಹುಬ್ಬಳ್ಳಿ ಸಮೀಪ ಅಂಚಟಗೇರಿ ಬಳಿ ಬಂದು, ಚಾಲಕ ಗಣೇಶನನ್ನು ಹೊರಕ್ಕೆ ಎಸೆದು ವಾಹನ ಸಮೇತ ಪರಾರಿಯಾಗಿದ್ದರು.

ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್‌ಸ್ಪೆಕ್ಟರ್ ಸಚಿನ್ ಚಲವಾದಿ ತನಿಖೆ ನಡೆಸಿದ್ದರು. 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ.

ದಂಡದ ಮೊತ್ತದಲ್ಲಿ 50 ಸಾವಿರ ರೂ. ಚಾಲಕ ಗಣೇಶನಿಗೆ, 10 ಸಾವಿರ ರೂ.ಗಳನ್ನು ಸರ್ಕಾರಕ್ಕೆ ಪಾವತಿಸಲು ಸೂಚಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಗಿರಿಜಾ ಎಸ್. ತಮ್ಮಿನಾಳ ವಾದ ಮಂಡಿಸಿದ್ದರು. ಇದನ್ನೂ ಓದಿ:ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಡ್ಡಾಯ – ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ

Comments

Leave a Reply

Your email address will not be published. Required fields are marked *