ಹಿಂದುತ್ವ ನನ್ನ ಮೊದಲ ಆಯ್ಕೆ ಆಮೇಲೆ ಸಚಿವ, ಶಾಸಕ ಸ್ಥಾನ: ಸುನೀಲ್ ಕುಮಾರ್

sunil kumar

ಉಡುಪಿ: ಹಿಂದುತ್ವ ಮತ್ತು ಅಭಿವೃದ್ಧಿ ವಿಚಾರದಲ್ಲಿ ರಾಜಿಯೇ ಇಲ್ಲ. ಹಿಂದುತ್ವವೇ ನನ್ನ ಮೊದಲ ಆಯ್ಕೆ. ಸಚಿವ, ಶಾಸಕ ಸ್ಥಾನ ಆ ನಂತರದ ಆಯ್ಕೆ ಎಂದು ಉಡುಪಿ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಹೆಜಮಾಡಿ ಮೂಲಕ ಸುನೀಲ್ ಕುಮಾರ್ ಉಡುಪಿ ಜಿಲ್ಲೆಗೆ ಆಗಮಿಸಿದರು. ಬೆಳ್ಮಣ್ ನಲ್ಲಿ ಸಚಿವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಬಿಜೆಪಿ ನಾಯಕರು, ಕಾರ್ಯಕರ್ತರು ಬರಮಾಡಿಕೊಂಡರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುನೀಲ್ ಕುಮಾರ್ ಅವರು, ಸಚಿವನಾಗಿ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸುತ್ತಿದ್ದೇನೆ. ಉಡುಪಿಗೆ ಬರುತ್ತಿರುವುದು ಸಂತೋಷ, ಭಾವನಾತ್ಮಕ ಕ್ಷಣ. ಕಾರ್ಕಳ ಕ್ಷೇತ್ರದ ಜನ ಮೂರುಬಾರಿ ಆಯ್ಕೆ ಮಾಡಿದ್ದರಿಂದ ಸಚಿವನಾದೆ. ಆದರೆ ಯಾವುದೇ ಹಂತದಲ್ಲೂ ಹಿಂದುತ್ವ ವಿಚಾರದಲ್ಲಿ ರಾಜಿ ಮಾಡುವುದಿಲ್ಲ. ಮೊದಲ ಆಯ್ಕೆ ಹಿಂದುತ್ವ ಮತ್ತು ಅಭಿವೃದ್ಧಿ ಎಂದರು.

ಪಕ್ಷ ದೊಡ್ಡ ಪ್ರಮಾಣದ ಹೊಣೆಗಾರಿಕೆಯನ್ನು ಹೆಗಲಿಗೇರಿಸಿದೆ. ಸಿಎಂ ಮತ್ತು ಪಕ್ಷದ ಹಿರಿಯರ ನಿರೀಕ್ಷೆಯಿಟ್ಟು ಸ್ಥಾನ ಕೊಟ್ಟಿದ್ದಾರೆ. ಜವಾಬ್ದಾರಿ ನಿಭಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನಗೆ ಇಷ್ಟದ ಖಾತೆ ಎಂದು ಯಾವುದು ಇಲ್ಲ ಮುಖ್ಯಮಂತ್ರಿಗಳು ಕೊಟ್ಟ ಖಾತೆಯನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ ಎಂದರು. ಇದನ್ನೂ ಓದಿ: ಅಭಿನಂದಿಸಲು ಹಾರ ತುರಾಯಿ ತರಬೇಡಿ, ಪುಸ್ತಕ ತನ್ನಿ: ಸುನೀಲ್ ಕುಮಾರ್

ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ
ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಪಕ್ಷ ಗೌರವ ಕೊಟ್ಟಿದೆ. ಶ್ರೀನಿವಾಸ್ ಶೆಟ್ಟಿಅವರಿಗೆ ಇನ್ನಷ್ಟು ಗೌರವ ಸಿಗಬೇಕು ಎಂಬ ನಿರೀಕ್ಷೆ ಸಹಜ. ಸಚಿವನಾಗಿ ನಾನು ಮಾಡುವ ಕೆಲಸಕ್ಕೆ ಶ್ರೀನಿವಾಸ್ ಶೆಟ್ಟಿ ಬೆಂಬಲ ಬೇಕು. ಸಚಿವ ಶ್ರೀನಿವಾಸ ಪೂಜಾರಿ, ಅಂಗಾರ ಅವರ ಮಾರ್ಗದರ್ಶನದಲ್ಲಿ ನಾನು ನಡೆಯುತ್ತೇನೆ. ಬಿಜೆಪಿ ಹಾಲಾಡಿಯವರನ್ನು ಖಂಡಿತ ಗುರುತಿಸುತ್ತದೆ. ಪಕ್ಷ ಹಾಲಾಡಿಯನ್ನು ಕರೆದು ಮಾತನಾಡಿಸುತ್ತದೆ ಎಂದು ಸುನೀಲ್ ಕುಮಾರ್ ಹೇಳಿದರು.

ವಿಜಯೇಂದ್ರ ಅವರಿಗೆ ಸೂಕ್ತ ಸ್ಥಾನಮಾನ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ಅದನ್ನು ತೀರ್ಮಾನಿಸುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ವಿಚಾರಕ್ಕೆ ಹೆಚ್ಚು ಪ್ರತಿಕ್ರಿಯೆ ನೀಡದ ಅವರು, ನಳಿನ್ ಕುಮಾರ್ ಕಟೀಲ್ ಅವರೇ ನಮ್ಮ ಅಧ್ಯಕ್ಷರು ಎಂದರು.

ಕಾಪು ಶಾಸಕ ಲಾಲಾಜಿ ಮೆಂಡನ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಂಗಳೂರು ಶಾಸಕ ಭರತ್ ಶೆಟ್ಟಿ ಸಚಿವರ ಜೊತೆಗಿದ್ದರು.

Comments

Leave a Reply

Your email address will not be published. Required fields are marked *