ಬೆಳಗಾವಿಯಲ್ಲಿ ಭಾರೀ ಮಳೆ- ಮನೆಗಳ ಕುಸಿತ

ಬೆಳಗಾವಿ: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಖಡೇ ಬಜಾರ್‍ನಲ್ಲಿ ಮನೆ ಕುಸಿದು ಬಿದ್ದಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಳಗಾವಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಬಿಟ್ಟು ಬಿಡದೇ ಮಳೆ ಸುರಿಯುತ್ತಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬೆಳಗಾವಿ ಕಂಗ್ರಾಳ ಗಲ್ಲಿಯಲ್ಲಿ ಒಂದು ಮನೆ, ನಂದಗಡದಲ್ಲಿ ಎರಡು ಮನೆಗಳು ಕುಸಿದಿವೆ. ಸತತ ಮಳೆಯಿಂದ ಶಿಥಿಲಗೊಂಡ ಕಟ್ಟಡಗಳಿಗೆ ಅಪಾಯ ಒದಗುವ ಶಂಕೆ ವ್ಯಕ್ತವಾಗುತ್ತಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಸಧ್ಯಕ್ಕಿಲ್ಲ ಪ್ರವಾಹ ಭೀತಿ
ಕೊಯ್ನಾ ಡ್ಯಾಂ ಸಾಮಥ್ರ್ಯ 100 ಟಿಎಂಸಿ ಇದ್ದು, ಸದ್ಯ ಡ್ಯಾಂನಲ್ಲಿ 60 ಟಿಎಂಸಿ ನೀರು ತುಂಬಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಸಧ್ಯಕ್ಕೆ ಪ್ರವಾಹ ಭೀತಿ ಇಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ತಿಳಿಸಿದರು. ಗುರುವಾರ ಎಸ್‍ಎಸ್‍ಎಲ್‍ಸಿ 2ನೇ ಪರೀಕ್ಷೆ ಹಿನ್ನೆಲೆ ಬೆಳಗಾವಿಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ನಿನ್ನೆಯಿಂದ ಬೆಳಗಾವಿ ಜಿಲ್ಲೆಯಾಧ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಚಿಕ್ಕೋಡಿ ಡಿಡಿಪಿಐ ಮನ್ನಿಕೇರಿ ಅವರ ಜೊತೆಗೆ ಮಾತನಾಡಿದ್ದೇನೆ. ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ, ಉತ್ತರಪತ್ರಿಕೆ ತಲುಪಿದೆ. ಹೀಗಾಗಿ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿಸಿದರು.

ಸರ್ದಾರ್ ಹೈಸ್ಕೂಲ್‍ನಲ್ಲಿ ಬೇರೆ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಕೊಯ್ನಾದಲ್ಲಿ ನಿನ್ನೆ ಜಾಸ್ತಿ ಮಳೆ ಆಗಿರುವುದರಿಂದ ಸುಮಾರು 6.5 ಟಿಎಂಸಿ ನೀರು ಕೊಯ್ನಾ ಡ್ಯಾಂಗೆ ಬಂದಿದೆ. ಸದ್ಯ 60 ಟಿಎಂಸಿ ನೀರು ಇರುವುದರಿಂದ ನೀರು ಬಿಡುಗಡೆ ಮಾಡಿಲ್ಲ. ಕೊಯ್ನಾ ಡ್ಯಾಂ ಸಾಮಥ್ರ್ಯ 100 ಟಿಎಂಸಿ ಇದೆ. ಹೀಗಾಗಿ ಸದ್ಯಕ್ಕೆ ನೀರು ಬಿಡುಗಡೆ ಮಾಡುವುದಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಇಲ್ಲ. ಆದರೂ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *