ಪ್ರವಾಸಿಗರೇ ಶನಿವಾರ, ಭಾನುವಾರ ನಂದಿಬೆಟ್ಟಕ್ಕೆ ಬರಬೇಡಿ

ಚಿಕ್ಕಬಳ್ಳಾಪುರ: ಕೊರೊನಾ ಮೂರನೇ ಅಲೆ ತಡೆಯುವ ಸಲುವಾಗಿ ವಿಕೇಂಡ್ ಶನಿವಾರ ಮತ್ತು ಭಾನುವಾರ ನಂದಿಬೆಟ್ಟ ಸಂಪೂರ್ಣ ಬಂದ್ ಮಾಡಲಿದ್ದು, ಪ್ರವಾಸಿಗರೇ ನಂದಿಬೆಟ್ಟಕ್ಕೆ ಬರಬೇಡಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಮನವಿ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಲತಾ ಅವರು, ಕಳೆದ ಶನಿವಾರ ಹಾಗೂ ಭಾನುವಾರ ಸಾವಿರಾರು ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸಿದ್ದು, ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರು. ನಂದಿಬೆಟ್ಟದಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿ ಪ್ರವಾಸಿಗರು ಪರದಾಡುವಂತಾಯಿತು. ಭಾನುವಾರ 12,000 ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಬಂದು ಹೋಗಿದ್ದು, ಪ್ರವಾಸಿಗರ ದಟ್ಟಣೆ ಹೆಚ್ಚಾಗಿ ಕೊರೊನಾ ನಿಯಮಗಳನ್ನು ಪ್ರವಾಸಿಗರು ಗಾಳಿಗೆ ತೂರಿದ್ರು. ಹೀಗಾಗಿ ಪ್ರವಾಸಿಗರೇ ವಿಕೇಂಡ್ ಶನಿವಾರ-ಭಾನುವಾರ ನಂದಿಬೆಟ್ಟದತ್ತ ಬಂದು ಬೇಜಾರು ಮಾಡಿಕೊಂಡು ವಾಪಾಸ್ ಹೋಗಬೇಡಿ. ವಾರದ ಇತರ ದಿನಗಳಲ್ಲೂ ಪ್ರವಾಸಿಗರ ಪ್ರವೇಶಕ್ಕೆ ಅವಕಾಶವಿದೆ. ಆದರೆ ನಂದಿಬೆಟ್ಟದ ಮೇಲ್ಭಾಗದಲ್ಲಿ 550 ಬೈಕ್ ಹಾಗೂ 310 ಕಾರುಗಳಿಗಷ್ಟೇ ಪಾರ್ಕಿಂಗ್  ಸೌಲಭ್ಯವಿದ್ದು, ಇಷ್ಟು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ನಂದಿಬೆಟ್ಟದಲ್ಲಿ ಶ್ವಾನ-ಕೋತಿಗಳ ಸ್ನೇಹಕ್ಕೆ ಪ್ರವಾಸಿಗರು ಫಿದಾ

ನಂದಿಬೆಟ್ಟದ ತಪ್ಪಲಿನ ಕೆಳಭಾಗದ ಚೆಕ್ ಪೋಸ್ಟ್ ನಲ್ಲೇ ಟೋಕನ್ ವಿತರಣೆ ಮಾಡಿ ಪ್ರವಾಸಿಗರಿಗೆ ಅವಕಾಶ ಕಲ್ಪಿಸುವ ಪ್ರಾಯೋಗಿಕ ಪ್ರಯತ್ನವನ್ನು ಮಾಡಲಾಗುವುದು. ಟೋಕನ್ ವಿತರಣೆ ಮಾಡುವ ಮೂಲಕ ವಾಹನಗಳ ದಟ್ಟಣೆ ಹಾಗೂ ಜನದಟ್ಟಣೆ ತಡೆಯುವ ಮೂಲಕ ಕೊರೊನಾ ಮೂರನೇ ಅಲೆ ತಡೆಯಲಾಗುವುದು. ಜೊತೆಗೆ ಈ ಟೋಕನ್ ವಿತರಣೆಯನ್ನು ಮುಂದಿನ ದಿನಗಳಲ್ಲಿ ಆನ್‍ಲೈನ್ ಮೂಲಕ ತಂತ್ರಜ್ಞಾನ ಬಳಸಿಕೊಂಡು ಟೋಕನ್ ನೀಡುವ ಕಾರ್ಯಕ್ಕೆ ಕೆಎಸ್‍ಟಿಡಿಸಿ ಆ್ಯಪ್ ತಯಾರಿ ಮಾಡಲಿದೆ. ಮತ್ತೊಂದೆಡೆ ಬೆಟ್ಟದ ಕೆಳಭಾಗದಲ್ಲಿ ಪಾರ್ಕಿಂಗ್ ಗೆ 7 ಎಕರೆ ಜಾಗ ಮೀಸಲಿಟ್ಟಿದ್ದು, ಅದಷ್ಟು ಬೇಗ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರ ಪ್ರವೇಶಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *