ಬಾಲ್ಯ ವಿವಾಹ- ಕಟ್ಟಿದ ತಾಳಿ ಕಿತ್ತೆಸೆದು ಬಾಲಕಿ ಆಕ್ರೋಶ

ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಗ್ರಾಮವೊಂದರಲ್ಲಿ ತಂದೆ, ತಾಯಿ ಹಾಗೂ ಸಂಬಂಧಿಕರು ಸೇರಿ ಅಪ್ರಾಪ್ತೆಯನ್ನು ಬಾಲ್ಯವಿವಾಹದ ಕೂಪಕ್ಕೆ ತಳ್ಳಿದ್ದಾರೆ. ಈ ವೇಳೆ ಬಾಲಕಿಯ ಆಕ್ರೋಶದ ಕಟ್ಟೆ ಒಡೆದಿದ್ದು, ತಾಳಿ ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಜಿಲ್ಲೆಯ ಹೊಸದುರ್ಗ ತಾಲೂಕು ವ್ಯಾಪ್ತಿಯ ಗ್ರಾಮದಲ್ಲಿ ಜುಲೈ 7ರಂದು ಈ ಬಾಲ್ಯ ವಿವಾಹ ನಡೆದಿದ್ದು, ವೀಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆದ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. ಶಿವಮೊಗ್ಗದಲ್ಲಿ ಪಿಯುಸಿ ಓದುತ್ತಿದ್ದ 16 ವರ್ಷ 7 ತಿಂಗಳು ವಯಸ್ಸಿನ ಬಾಲಕಿಯನ್ನು ದಿಡೀರ್ ಎಂದು ಮನೆಗೆ ಕರೆತಂದಿದ್ದ ಪೋಷಕರು, ಒತ್ತಾಯಪೂರ್ವಕವಾಗಿ ತನ್ನ ಸೋದರ ಮಾವನೊಂದಿಗೆ ಜಮೀನಿನಲ್ಲಿ ಬಾಲ್ಯ ವಿವಾಹ ಮಾಡಿದ್ದಾರೆ.

ಈ ವಿವಾಹವನ್ನು ವಿರೋಧಿಸಿ ಕಣ್ಣೀರಿಟ್ಟು ರೋಧಿಸಿರುವ ಬಾಲಕಿ, ಕಟ್ಟಿದ ತಾಳಿಯನ್ನು ಕಿತ್ತೆಸೆದು ಪೋಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಅಲ್ಲದೆ ನಂಬಿಸಿ ಮೋಸ ಮಾಡಿದಿಯಲ್ಲ ಅಪ್ಪ ಎಂದು ತಂದೆ ವಿರುದ್ಧ ಕಿಡಿ ಕಾರಿದ್ದಾಳೆ. ಬಾಲ್ಯ ವಿವಾಹದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

ಈ ವೀಡಿಯೋ ವೈರಲ್ ಆದ ತಕ್ಷಣ ಎಚ್ಚೆತ್ತ ಚಿತ್ರದುರ್ಗ ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಬಾಲಕಿಯನ್ನು ರಕ್ಷಿಸಿದ್ದಾರೆ. ನೊಂದ ಬಾಲಕಿಗೆ ಬಾಲಮಂದಿರದಲ್ಲಿ ಆಶ್ರಯ ಕಲ್ಪಿಸಿದ್ದಾರೆ. ಅಲ್ಲದೆ ಬಾಲಕಿಗೆ ಒತ್ತಾಯಪೂರ್ವಕವಾಗಿ ಬಾಲ್ಯ ವಿವಾಹ ಮಾಡಿರುವ ಬಾಲಕಿಯ ತಂದೆ, ತಾಯಿ ಹಾಗೂ ಸೋದರ ಸಂಬಂಧಿಗಳು ಹಾಗೂ ಮಗನನ್ನು ಇಂದು ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ರಾಧಿಕಾ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *