ಕೊಡಗಿನಲ್ಲಿ ಮತ್ತೆ ಒಂದು ವಾರ ಲಾಕ್‍ಡೌನ್ ಮುಂದುವರಿಕೆ ಸುಳಿವು ನೀಡಿದ ಡಿಸಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ದಿನದಿಂದ ದಿನಕ್ಕೆ ಕಣ್ಣಾಮುಚ್ಚಾಲೆ ಆಟ ಮುಂದುವರಿದಿದೆ. ಹೀಗಾಗಿ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆ ಆಗುವವರೆಗೂ ಜಿಲ್ಲೆಯನ್ನು ಅನ್‍ಲಾಕ್ ಮಾಡುವುದು ಬೇಡ ಎಂದು ಕೊಡಗಿನ ಇಬ್ಬರು ಶಾಸಕರು ಹೇಳಿದ ಬೆನ್ನಲ್ಲೇ ಇದೀಗ ಮತ್ತೆ ಒಂದು ವಾರ ಲಾಕ್‍ಡೌನ್ ಮುಂದುವರಿಯುವ ಸಾಧ್ಯತೆ ಇದೆ ಎಂದು ಕೊಡಗಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸುಳಿವು ನೀಡಿದ್ದಾರೆ.

ಮಡಿಕೇರಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಒಂದು ವಾರದ ಪಾಸಿಟಿವ್ ರೇಟ್ ನೋಡಿದರೆ ಶೇ.6.5 ಇದೆ. ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಟೆಸ್ಟಿಂಗ್ ಪ್ರಮಾಣ ಹೆಚ್ಚು ಮಾಡಿರುವುದರಿಂದ ಸೋಂಕಿತರ ಪ್ರಮಾಣದಲ್ಲಿ ಏರುಪೇರು ಅಗುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳ ಜೊತೆ ಆಂತರಿಕವಾಗಿ ಚರ್ಚಿಸಿರುವಂತೆ ಲಾಕ್‍ಡೌನ್ ಮುಂದುವರಿಸುತ್ತೇವೆ ಎಂದು ಸುಳಿವು ನೀಡಿದ್ದಾರೆ. ಇದನ್ನೂ ಓದಿ : ಜೋಕಾಲಿ ತಂದ ಆಪತ್ತು- ಎರಡು ಎಳೆಯ ಜೀವಗಳಿಗೆ ಕುತ್ತು

ಮೂಲಗಳ ಪ್ರಕಾರ ಜಿಲ್ಲೆಯಲ್ಲಿ ಮತ್ತೆ ಒಂದು ವಾರ ಲಾಕ್‍ಡೌನ್ ಮುಂದುವರಿಯುವ ಸಾಧ್ಯತೆ ಇದ್ದು, ವಾರದ ಮೂರು ದಿನಗಳಾದ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಳಗ್ಗೆ 6 ರಿಂದ 4 ಗಂಟೆಯ ವರೆಗೆ ಕಾಲಾವಕಾಶ ವಿಸ್ತರಣೆ ಅಗುವ ಸಾಧ್ಯತೆ ಇದೆ. ಇಂದು ಸಂಜೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುವ ಅನ್‍ಲಾಕ್ ಸಭೆಯ ಬಳಿಕ ಕೊಡಗು ಜಿಲ್ಲೆಗೆ ಲಾಕ್‍ಡೌನ್ ಮುಂದುವರಿಯುತ್ತಾ ಅಥವಾ ಅನ್‍ಲಾಕ್ ಮಾಡುತ್ತಾರಾ..? ಎಂಬ ನಿರ್ಧಾರ ಹೊರಬರಲಿದೆ.

Comments

Leave a Reply

Your email address will not be published. Required fields are marked *