ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ರಿಟೈನಿಂಗ್ ವಾಲ್ ನಿರ್ಮಾಣ- ಸ್ಥಳ ಪರಿಶೀಲಿಸಿದ ಪ್ರತಾಪ್ ಸಿಂಹ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಉಂಟಾಗಬಹುದಾದ ಗುಡ್ಡ ಕುಸಿತವನ್ನು ತಪ್ಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ-275ರ ಸಂಪಾಜೆ ರಸ್ತೆಯಲ್ಲಿ ಸುಮಾರು 22 ಕಡೆ ರಿಟೈನಿಂಗ್ ವಾಲ್ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಈ ಸ್ಥಳವನ್ನು ಇಂದು ಸಂಸದ ಪ್ರತಾಪ್ ಸಿಂಹ ಅವರು ಶಾಸಕ ಕೆ.ಜಿ.ಬೋಪಯ್ಯ, ರಾಷ್ಟ್ರೀಯ ಹೆದ್ದಾರಿ ಕರ್ನಾಟಕ ವಿಭಾಗದ ಮುಖ್ಯ ಎಂಜಿನಿಯರ್ ವಿಜಯ ಕುಮಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕಳೆದ ಮೂರು ವರ್ಷಗಳಿಂದ ಸುರಿದ ಭಾರೀ ಮಳೆಯಿಂದ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಭೂ ಕುಸಿತ ಸಂಭವಿಸಿ, ಅಪಾರ ಹಾನಿ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿಯಿಂದ ಸಂಪಾಜೆ ವರೆಗಿನ ಕೆಲವು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡು ಅನೇಕ ಸಮಸ್ಯೆಗಳು ಉಂಟಾಗಿತ್ತು. ಈ ಸಂಬಂಧ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಭೂ ಕುಸಿತವಾಗುವ ಸ್ಥಳಗಳಲ್ಲಿ ರಿಟೈನಿಂಗ್ ವಾಲ್‍ಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ 59 ಕೋಟಿ ರೂ. ವೆಚ್ಚದಲ್ಲಿ 18 ಕಡೆಗಳಲ್ಲಿ ರಿಟೈನಿಂಗ್ ವಾಲ್‍ಗಳನ್ನು ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಪ್ರಸಕ್ತ ಸಾಲಿನ ಜೂನ್ ತಿಂಗಳಲ್ಲಿ ಸುರಿದ ಮಳೆಗೆ ಮತ್ತೆ ಕೆಲವು ಕಡೆ ಭೂಕುಸಿತವಾಗಿದ್ದು, ಈ ಸಂಬಂಧ ಅಗತ್ಯವಿರುವ ಕಡೆ ರಿಟೈನಿಂಗ್ ವಾಲ್ ನಿರ್ಮಿಸಲು ಜಾಗ ಗುರುತಿಸಲಾಗಿದ್ದು, ಈ 22 ಕಡೆಗಳಲ್ಲಿ ರಿಟೈನಿಂಗ್ ವಾಲ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುವ ಸಂಬಂಧ ರಾಷ್ಟ್ರೀಯ ಹೆದ್ದಾರಿಯ ಕರ್ನಾಟಕ ವಿಭಾಗದ ಮುಖ್ಯ ಎಂಜಿನಿಯರ್ ವಿಜಯ ಕುಮಾರ್ ಅವರ ಜೊತೆ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದರು.

Comments

Leave a Reply

Your email address will not be published. Required fields are marked *