BSY ಇಟ್ಕೋತೀರಾ, ಕಿತ್ತು ಹಾಕ್ತೀರಾ – ಆದ್ರೆ ಶೀಘ್ರ ನಿರ್ಧಾರಕ್ಕೆ ಬನ್ನಿ ಎಂದು BJPಗೆ ತಿವಿದ ಸಿದ್ದರಾಮಯ್ಯ

ಬೆಂಗಳೂರು: ಕೋವಿಡ್ ಕಾಲದಲ್ಲಿ ಬಿಜೆಪಿ ಮನೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಟ್ವೀಟ್ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಕಮಲ ನಾಯಕರನ್ನು ತಿವಿದಿದ್ದಾರೆ. ನೀವು ಬಿಎಸ್‍ವೈ ಅವರನ್ನು ಇಟ್ಟುಕೊಳ್ಳೀರಾ, ಕಿತ್ತು ಹಾಕ್ತೀರಾ….? ಅದು ನಿಮ್ಮ ಪಕ್ಷದ ವಿಚಾರ. ಆದ್ರೆ ಶೀಘ್ರವಾಗಿ ಒಂದು ನಿರ್ಧಾರಕ್ಕೆ ಬನ್ನಿ. ನಿರ್ಧಾರ ಮಾಡಿ, ಒಂದು ಸುಭದ್ರ ಸರ್ಕಾರ ನೀಡಿ ಎಂದು ಬಿಜೆಪಿ ನಾಯಕರಿಗೆ ವ್ಯಂಗ್ಯವಾಗಿ ಕಿವಿ ಮಾತು ಹೇಳಿದ್ದಾರೆ.

ಮುನಿದಿರುವ ಪ್ರಕೃತಿ ಅಲ್ಪ ದಯೆ ತೋರುತ್ತಿರುವ ಕಾರಣದಿಂದಾಗಿಯೋ ಏನೋ, ಕೊರೊನಾ ಸೋಂಕು ಸ್ವಲ್ಪ ತಹಬಂದಿಗೆ ಬರುತ್ತಿದೆ. ಅಷ್ಟರಲ್ಲಿ ಬಿಜೆಪಿ ಸರ್ಕಾರದಲ್ಲಿ ಭಿನ್ನಮತದ ಜಗಳ ತಾರಕಕ್ಕೇರಿ ಆಡಳಿತ ಯಂತ್ರ ಸಂಪೂರ್ಣ ಸ್ಥಬ್ಧವಾಗಿರುವುದು ರಾಜ್ಯದ ಜನರ ದೌರ್ಭಾಗ್ಯ ಎಂದು ಹೇಳಿದ್ದಾರೆ.

ಸಚಿವರು ಕಚೇರಿ ಹಾಗೂ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಅದ್ರೆ ಬಿಜೆಪಿ ಶಾಸಕರು ದೆಹಲಿಯಿಂದ ಬಂದಿರುವ ಬಿಜೆಪಿ ಹೈಕಮಾಂಡ್ ಪ್ರತಿನಿಧಿಗೆ ಅಹವಾಲು ಸಲ್ಲಿಸಲು ಕ್ಯೂನಲ್ಲಿದ್ದಾರೆ. ಸಿಎಂ ಪರ- ವಿರೋಧಿ ಬಣ ಜಗಳದಲ್ಲಿ ಜನರ ನೋವು ಕೇಳೋರು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕೊರೊನಾ ನಿಯಂತ್ರಣಕ್ಕೆ ಬಂದಿಲ್ಲ, ಲಸಿಕೆ ನೀಡುವ ಕಾರ್ಯ ಕುಂಟುತ್ತಾ ಸಾಗಿದೆ. ಇನ್ನೊಂದೆಡೆ ಮೂರನೇ ಅಲೆ ಬಗ್ಗೆ ತಜ್ಞರು ನಿರಂತರವಾಗಿ ಎಚ್ಚರಿಸುತ್ತಿದ್ದಾರೆ. ಸಿಎಂ ತನ್ನ ಉಳಿವಿಗಾಗಿ ಹೋರಾಡುತ್ತಿದ್ದಾರೆ, ಜನರನ್ನು ಉಳಿಸುವವರು ಯಾರು..? ಜನ ಸಂಕಷ್ಟದಲ್ಲಿದ್ದರೆ ಸಿಎಂ ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪಕ್ಷಾಂತರಿಗಳ ಅನೈತಿಕತೆಯಿದಿಂದ ಸರ್ಕಾರ ಬಂದಿದೆ. ಮೂಲ ನಿವಾಸಿಗಳು ಅವರ ವಿರುದ್ಧ ತಿರುಗಿ ಬಿದ್ದಿರುವುದು ಪ್ರಕೃತಿ ಸಹಜ ನ್ಯಾಯವೇ ಸರಿ. ಈಗಲೂ ಕಾಲ ಮಿಂಚಿಲ್ಲ, ಅನೈತಿಕ ಬೆಂಬಲ ಬೇಡವೆಂದಾದರೆ ಪಕ್ಷಾಂತರಿಗಳನ್ನು ಕಿತ್ತು ಹಾಕಿ. ಯಾಕೆ ಗೋಳಾಡುತ್ತೀರಿ ಎಂದು ಪ್ರಶ್ನಿಸಿದರು.

ಕೋವಿಡ್ ಎದುರಿಸಲು ಒಂದು ಸುಭದ್ರ ಸರ್ಕಾರ ಬೇಕು. ಸಿಎಂ ಯಾರು ಎನ್ನುವುದು ಬಿಜೆಪಿಯ ವಿಚಾರ. ಶೀಘ್ರವಾಗಿ ಒಂದು ನಿರ್ಧಾರಕ್ಕೆ ಬಂದು ಸುಭದ್ರ ಸರ್ಕಾರ ಕೊಡಿ, ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ತೊಲಗಿ ಹೋಗಿ ಎಂದು ಟ್ವೀಟ್ ಮಾಡಿ ತಿವಿದಿದ್ದಾರೆ ಸಿದ್ದರಾಮಯ್ಯ. ಇದನ್ನೂ ಓದಿ: ಸಿಎಂ ಬಿಎಸ್‍ವೈ ನೇತೃತ್ವದಲ್ಲಿ ಉತ್ತಮ ಕೆಲಸವಾಗುತ್ತಿದೆ: ಅರುಣ್ ಸಿಂಗ್

Comments

Leave a Reply

Your email address will not be published. Required fields are marked *