ಪ್ರಧಾನಿ ಮೋದಿ ದೊಡ್ಡ ಬಂಡಲ್ ಬಡಾಯಿ: ಸೊರಕೆ ಕಿಡಿ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ದೊಡ್ಡ ಬಂಡಲ್ ಬಡಾಯಿ ವ್ಯಕ್ತಿ. ಬಾಯಲ್ಲಿ ಮಾತನಾಡುವುದನ್ನು ಬಿಟ್ಟು, ಕಳೆದ ಏಳು ವರ್ಷದಲ್ಲಿ ಯಾವುದಾದರೂ ಒಂದು ಸಾಧನೆ ಮಾಡಿದ್ದರೆ, ತೋರಿಸಲಿ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಗುಡುಗಿದ್ದಾರೆ.

ಪೆಟ್ರೋಲ್ ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಉಡುಪಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ಬೆಲೆ ಏರಿಕೆ ನೀತಿಯನ್ನು ಖಂಡಿಸಿದ್ದಾರೆ. ಇದನ್ನೂ ಓದಿ: ಲಸಿಕೆ ದುರ್ಬಳಕೆ ಮಾಡುತ್ತಿರೋ ಅಶ್ವಥ್ ನಾರಾಯಣರನ್ನು ಕೂಡಲೇ ವಜಾಗೊಳಿಸಿ: ಮೋಹನ್ ದಾಸರಿ ಆಗ್ರಹ

ಈ ವೇಳೆ ಮಾತನಾಡಿದ ವಿನಯ್ ಕುಮಾರ್ ಸೊರಕೆಯವರು, ಪ್ರಧಾನಿ ನರೇಂದ್ರ ಮೋದಿ ರೀಲ್ ಬಿಡುವುದರಲ್ಲಿ ನಿಸ್ಸೀಮ. ಹೇಳಿದ್ದನ್ನು ಒಂದು ಮಾಡಿಲ್ಲ. 30 ರೂಪಾಯಿಗೆ ಪೆಟ್ರೋಲ್ ಕೊಡುತ್ತೇನೆ ಎಂದು ಹೇಳಿ ನೂರು ರೂಪಾಯಿ ಮಾಡಿದರು. 15 ಲಕ್ಷ ಖಾತೆಗೆ ಜಮಾ ಮಾಡುತ್ತೇನೆ ಎಂದು ಸುಳ್ಳು ಹೇಳಿ ತಿರುಗಾಡುತ್ತಿದ್ದಾರೆ. ಇಮೇಜ್ ಬಿಲ್ಡ್ ಮಾಡುವುದರಲ್ಲಿ ಏಳು ವರ್ಷ ಕಳೆದು ಹೋಯಿತು ಎಂದು ಹೇಳಿ ಕಿಡಿಕಾರಿದರು.

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲೂ ಕೇಂದ್ರ, ರಾಜ್ಯ ಸರಕಾರದಿಂದ ಜನ ವಿರೋಧಿ ನೀತಿ ಜಾರಿಯಲ್ಲಿದೆ. ಸತತ ಬೆಲೆ ಏರಿಸುವ ಮೂಲಕ ಜನರ ಬದುಕಿನ ಮೇರೆ ಬರೆ ಎಳೆಯುತ್ತಿದ್ದಾರೆ. ಯುಪಿಎ ಸರ್ಕಾರ ಇದ್ದಾಗ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರು, ಈಗ ಇಂಧನ, ದಿನ ಬಳಕೆ ವಸ್ತುಗಳ ನಿರಂತರ ಬೆಲೆ ಏರಿಕೆಗೆ ಮೌನವಹಿಸಿದ್ದಾರೆ ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಒಟ್ಟಾರೆ ಇಂದು ಸಾಮಾಜಿಕ ಅಂತರ ಕಾಪಾಡಿ ಮಾಸ್ಕ್ ಧರಿಸಿ ಪ್ರತಿಭಟನೆ ಮಾಡಿದರು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಸಹಿತ ಜಿಲ್ಲಾ ಮುಖಂಡರು ಭಾಗಿಯಾಗಿದ್ದರು. ಇದನ್ನೂ ಓದಿ: ಡಿಸಿಎಂ ಜೊತೆ 30ಕ್ಕೂ ಹೆಚ್ಚು ವಿವಿಧ ಮಠಗಳ ಸ್ವಾಮೀಜಿಗಳಿಂದ ಚರ್ಚೆ

Comments

Leave a Reply

Your email address will not be published. Required fields are marked *