ಬೆಂಗಳೂರು: ಬೆಂಗಳೂರಿನಿಂದ ತಮಿಳುನಾಡಿಗೆ ತರಕಾರಿ ಸಾಗಿಸುವ ವಾಹನದಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಗರದ ಕೆಆರ್ ಮಾರ್ಕೆಟ್ ನಲ್ಲಿ ನಡೆದಿದೆ.

ಮಂಗಳವಾರ ತಡರಾತ್ರಿ ಪೊಲೀಸರು ತಪಾಸಣೆ ಮಾಡುವ ವೇಳೆ ತರಕಾರಿ ತುಂಬಿದ್ದ ಜೀಪ್ ಕಲಾಸಿಪಾಳ್ಯ ಕಡೆಯಿಂದ ಬರುತ್ತಿತ್ತು. ಇಡೀ ಜೀಪ್ ತುಂಬಾ ಬೇರೆ ಬೇರೆ ರೀತಿಯ ತರಕಾರಿಗಳು ತುಂಬಿದ್ದವು. ಮಾರ್ಕೆಟ್ ಕಡೆಯಿಂದ ಬರುತ್ತಿದ್ದ ತರಕಾರಿ ವಾಹನ, ಕಲಾಸಿಪಾಳ್ಯ ಕಡೆಯಿಂದ ಬರುತ್ತಿದ್ದನ್ನು ನೋಡಿದ ಪೊಲೀಸರು, ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತರಕಾರಿಗಳ ನಡುವೆ, ಎರಡು ಬಗೆಯ ಬರೋಬ್ಬರಿ ಐನೂರು ಲೀಟರ್ ಮದ್ಯ ಪತ್ತೆಯಾಗಿದೆ.

ತಕ್ಷಣ ಡ್ರೈವರ್ ರಾಮಕೃಷ್ಣನ್ ಮತ್ತು ಕ್ಲೀನರ್ ರಾಜಕುಮಾರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ವಿಚಾರಣೆ ವೇಳೆ ತಮಿಳುನಾಡಿನಲ್ಲಿ ಸದ್ಯ ಲಾಕ್‍ಡೌನ್ ಇರುವ ಕಾರಣ, ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಿದೆ. ಹಾಗಾಗಿ ಕರ್ನಾಟಕದಿಂದ ತರಕಾರಿ ವಾಹನಗಳಲ್ಲಿ ಮದ್ಯ ಸಾಗಾಟ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಪ್ರತಿನಿತ್ಯ ತರಕಾರಿ ವ್ಯಾಪಾರಕ್ಕೆ ಅಂತಾ ಬೆಂಗಳೂರಿಗೆ ಬರುವ ವಾಹನಗಳು, ತರಕಾರಿ ಜೊತೆಗೆ ಮದ್ಯವನ್ನು ಖರೀದಿ ಮಾಡಿ ತರಕಾರಿ ನಡುವೆ ಸಾಗಾಟ ಮಾಡುತ್ತಿರುವುದು ಬಹಿರಂಗಗೊಂಡಿದೆ. ಇದನ್ನು ಓದಿ:ಸರಕಾರಿ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ- ಮೂರು ತಿಂಗಳ ಸಂಬಳ ಬಾಕಿ

ಕರ್ನಾಟಕದಿಂದ ತೆಗೆದುಕೊಂಡು ಹೋಗುವ ಮದ್ಯವನ್ನು ತಮಿಳುನಾಡಿನಲ್ಲಿ ಮೂರು, ನಾಲ್ಕು ಪಟ್ಟು ಹೆಚ್ಚುವರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ತರಕಾರಿ ವ್ಯಾಪಾರಕ್ಕಿಂತ ಇದೇ ವ್ಯವಹಾರದಲ್ಲಿ ಅಧಿಕ ಲಾಭ ಬರುತ್ತಿದ್ದ ಕಾರಣ, ಈ ಇಬ್ಬರು ಆರೋಪಿಗಳು ಈ ಕೆಲಸ ಮಾಡುತ್ತಿದ್ದರು. ಇದು ಕೇವಲ ಒಂದು ವಾಹನದ ಕಥೆಯಲ್ಲ. ಬಹುತೇಕ ತಮಿಳುನಾಡಿನಿಂದ ತರಕಾರಿಗಾಗಿ ಬೆಂಗಳೂರಿಗೆ ಬರುವ ವಾಹನ ಸವಾರರು, ಇದೇ ವ್ಯವಹಾರ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರುವ ಪೊಲೀಸರು, ಸ್ಪೆಷಲ್ ಡ್ರೈವ್ ಮೂಲಕ ಮದ್ಯ ಸಾಗಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ. ಇದನ್ನು ಓದಿ:ಬಾಳೆಹಣ್ಣಿನ ಗದ್ದೆಗೆ ಬೆಂಕಿ ಹಚ್ಚಿದ ಅನ್ನದಾತ

Leave a Reply