ಮಾನ, ಮರ್ಯಾದೆ ಇರುವ ಎಂಪಿ ಹೀಗೆ ಮಾಡಲ್ಲ, ಐಎಎಸ್ ಅಧಿಕಾರಿಗಳ ಕಿತ್ತಾಟದ ಬಗ್ಗೆ ತನಿಖೆ ಆಗಬೇಕು: ಸಿದ್ದರಾಮಯ್ಯ

– ಪ್ರತಾಪ್ ಸಿಂಹ ಮೊದಲು ರೋಹಿಣಿ ಸಿಂಧೂರಿಗೆ, ಬಳಿಕ ಶಿಲ್ಪಾ ನಾಗ್ ಅವರಗೆ ಸಪೋರ್ಟ್ ಮಾಡಿದರು

ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವಿನ ಕಿತ್ತಾಟದ ಬಗ್ಗೆ ತನಿಖೆ ನಡೆಯಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಒಬ್ಬ ಎಂಪಿಯಾಗಿ ಅಧಿಕಾರಿಗಳ ಬೆಂಬಲಿಸೋದು ಅಥವಾ ವಿರೋಧಿಸೋದು ಸರಿಯಾ? ಅವರದೇ ಸರ್ಕಾರ ಇದೆ. ಅಲ್ಲದೆ ಅವರು ಎಂಪಿ, ಮಾನ ಮರ್ಯಾದೆ ಇರೋರು ಹೀಗೆಲ್ಲ ಮಾಡಲ್ಲ, ಮೈಸೂರು ಜಿಲ್ಲೆಯಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಕಿತ್ತಾಡಿಕೊಂಡಿದ್ದಾರೆ. ಈ ಕಿತ್ತಾಟಕ್ಕೆ ಬಿಜೆಪಿಯ ಚುನಾಯಿತ ಪ್ರತಿನಿಧಿಗಳು ಹಾಗೂ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಕಾರಣ ಎಂದು ಆರೋಪಿಸಿದರು. ಇದನ್ನೂ ಓದಿ: ರೋಹಿಣಿ ಸಿಂಧೂರಿ, ಶಿಲ್ಪಾ ನಾಗ್ ಇಬ್ಬರೂ ವರ್ಗಾವಣೆ- ಸರ್ಕಾರದಿಂದ ಆದೇಶ

ಅದೆಂತದೋ ಸಿಂಹ, ಎಂಥಾ ಸಿಂಹ.. ಪ್ರತಾಪ ಸಿಂಹ ಮೊದಲು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಗೆ ಸಪೋರ್ಟ್ ಮಾಡುತ್ತಿದ್ದರು, ಆಮೇಲೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆಯಾಗಿದ್ದ ಶಿಲ್ಪಾನಾಗ್‍ಗೆ ಸಪೋರ್ಟ್ ಮಾಡೋಕೆ ಶುರು ಮಾಡಿದರು. ಬಿಜೆಪಿ ಜನಪ್ರತಿನಿಧಿಗಳಿಂದಲೇ ಈ ಗಲಾಟೆ ನಡೆಯಿತು ಎಂದು ದೂರಿದರು. ಇದನ್ನೂ ಓದಿ: ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗ್ತಿದ್ದೇನೆ – ರೋಹಿಣಿ ಸಿಂಧೂರಿ

ಐಎಎಸ್ ಅಧಿಕಾರಿಗಳಿಗೆ ಸುದ್ದಿಗೋಷ್ಠಿ ಮಾಡಲು ಅಧಿಕಾರ ಕೊಟ್ಟವರು ಯಾರು? ರೋಹಿಣಿ ಸಿಂಧೂರಿ ಜಮೀನು ಒತ್ತುವರಿ ತಡೆಯೋಕೆ ಹೋಗಿದ್ದಕ್ಕೆ ಹೀಗಾಯ್ತು ಅಂದಿದ್ದಾರೆ. ಇದರ ಬಗ್ಗೆ ತನಿಖೆ ಆಗಬೇಕು. ಬಿಜೆಪಿ ಜನಪ್ರತಿನಿಧಿಗಳಿಗೆ ರೋಹಿಣಿ ಸಿಂಧೂರಿ ತಗೆಯಬೇಕು, ಶಿಲ್ಪಾ ನಾಗ್ ಅವರಿಗೆ ಡಿಸಿ ಸ್ಥಾನ ಕೊಡಿಸಬೇಕು ಅನ್ನೋದಿತ್ತು. ಅಧಿಕಾರಿಗಳನ್ನು ಹೊಗಳುವುದು, ತೆಗಳುವುದು ಜನಪ್ರತಿನಿಧಿಗಳ ಕೆಲಸವಲ್ಲ. ಜನರ ಕೆಲಸ ಮಾಡುವುದು ಜನ ಪ್ರತಿನಿಧಿಗಳ ಕೆಲಸ. ಎಲ್ಲಾ ಬೆಳವಣಿಗೆಗಳ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: CSR ಫಂಡ್ ಲೆಕ್ಕ ನೀಡಿಲ್ಲ, ಕೋವಿಡ್ ಕೇರ್ ಸೆಂಟರ್ ತೆರೆದಿಲ್ಲ- ಶಿಲ್ಪಾ ನಾಗ್ ವಿರುದ್ಧ ಡಿಸಿ ರೋಹಿಣಿ ಸಿಂಧೂರಿ ಪ್ರತ್ಯಾರೋಪ

Comments

Leave a Reply

Your email address will not be published. Required fields are marked *