ಎಲ್ಲದಕ್ಕೂ ಮೂಹೂರ್ತ ಇಟ್ಟಿದ್ದು ಇಲ್ಲೇ, ಈಗಲೂ ಇಟ್ಟಿದ್ದೇವೆ: ಎಚ್. ವಿಶ್ವನಾಥ್

ಮೈಸೂರು: ಎಲ್ಲದಕ್ಕೂ ಮುಹೂರ್ತ ಇಟ್ಟಿದ್ದು ಶ್ರೀನಿವಾಸ್ ಪ್ರಸಾದ್ ಮನೆಯಲ್ಲಿ ಈಗಲೂ ಮುಹೂರ್ತ ಇಟ್ಟಿದ್ದೇವೆ. ಯಾವುದಕ್ಕೆ ಎಂದು ಹೇಳುವುದಿಲ್ಲ ಎನ್ನುವ ಮೂಲಕ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕುತೂಹಲ ಮೂಡಿಸಿದ್ದಾರೆ.

ಮೈಸೂರಿನಲ್ಲಿ ಇಂದು ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿದ್ದ ಎಚ್. ವಿಶ್ವನಾಥ್ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ಮನೆಯಲ್ಲಿ ಹಲವು ವಿಚಾರಕ್ಕೆ ಮೂಹೂರ್ತ ಇಟ್ಟಿದ್ದೇವೆ. ಸಿದ್ದರಾಮಯ್ಯ ಸೋಲಿಗೂ ಇಲ್ಲೇ ಮುಹೂರ್ತ ಇಟ್ಟಿದ್ದು. ಸಮ್ಮಿಶ್ರ ಸರ್ಕಾರ ಪತನಕ್ಕೂ ಇಲ್ಲೇ ಮುಹೂರ್ತ ಇಟ್ಟಿದ್ದು. ಯಡಿಯೂರಪ್ಪ ಸಿಎಂ ಆಗುವುದಕ್ಕೂ ಮುಹೂರ್ತ ಇಟ್ಟಿದ್ದು ಇಲ್ಲಿಯೇ. ನಂತರದ ಹಲವು ಬೆಳವಣಿಗೆ ಪ್ರಸಾದ್ ಮನೆ ಸಾಕ್ಷಿ ಆಗಿದೆ. ಈಗಲೂ ಪ್ರಸಾದ್ ಭೇಟಿಯ ಜೊತೆ ರಾಜಕೀಯ ಹಾಗೂ ಜಿಲ್ಲೆಯ ವಿದ್ಯಮಾನದ ಬಗ್ಗೆ ಮಾತನಾಡಿದ್ದೇವೆ ಎಂದರು. ಇದನ್ನೂ ಓದಿ: ಮತ್ತೆ ಡಿಸಿಗೆ ಪ್ರಶ್ನೆ ಕೇಳಿದ ಪ್ರತಾಪ್ ಸಿಂಹ – ಇನ್ಮುಂದೆ ಮಾತಾಡಲ್ಲವೆಂದು ಕದನ ವಿರಾಮ ಘೋಷಣೆ!

ಸದ್ಯಕ್ಕೆ ಯಾವ ವಿಚಾರಕ್ಕೆ ಮುಹೂರ್ತ ಎಂದು ಹೇಳುವುದಿಲ್ಲ. ಕಾದು ನೋಡೋಣ. ಸಿಎಂ ಯಡಿಯೂರಪ್ಪ ಅವರಿಗೆ ಆರೋಗ್ಯ ಸರಿಯಿಲ್ಲ. ಅವರ ಆರೋಗ್ಯ ಸರಿಯಾಗಬೇಕು. ಅದರ ಜೊತೆ ರಾಜ್ಯದ ಆಡಳಿತದ ಆರೋಗ್ಯವು ಸರಿಯಾಗಬೇಕು. ಇದಕ್ಕಾಗಿ ಹೈಕಮಾಂಡ್ ಶೀಘ್ರವೇ ಒಂದು ತೀರ್ಮಾನ ಕೈಗೊಳ್ಳಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ನಾಯಕತ್ವ ಬದಲಾವಣೆಗೆ ಪುಷ್ಠಿ ಕೊಟ್ಟಂತೆ ಹೇಳಿಕೆ ನೀಡಿದರು.

ರಾಜ್ಯ ರಾಜಕಾರಣದಲ್ಲಿ ಸ್ವಲ್ಪ ಗೊಂದಲ ಇದೆ. ಕೆಲವರು ದೆಹಲಿಗೆ ಹೋಗಿದ್ದಾರೆ. ಇನ್ನು ಕೆಲವರು ಹೇಳಿಕೆ ಕೊಡುತ್ತಿದ್ದಾರೆ. ಈ ಮಧ್ಯೆ ಯಡಿಯೂರಪ್ಪನವರು ಏನೂ ಮಾತನಾಡುತ್ತಿಲ್ಲ. ಯಾರು ಏನೇ ಮಾಡಿದ್ರು ತೀರ್ಮಾನ ಮಾಡೋದು ಹೈಕಮಾಂಡ್. ಹಾಗಾಗಿ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡುತ್ತದೆ ಎಂಬ ವಿಶ್ವಾಸ ಹೊಂದಿದ್ದೇವೆ ಎಂದರು.

Comments

Leave a Reply

Your email address will not be published. Required fields are marked *