ಮಳೆ ಬರದಿದ್ರೂ ಭಟ್ಕಳದಲ್ಲಿ ಮುಳಗಡೆಯಾಯ್ತು ಇಡೀ ಗ್ರಾಮ

– ಜನರ ಸಂಕಷ್ಟ ಕೇಳದ ಅಧಿಕಾರಿಗಳು

ಕಾರವಾರ: ಸಾಮಾನ್ಯವಾಗಿ ಭಾರೀ ಮಳೆಯಿಂದ ನೆರೆಯಾಗೋದನ್ನ ಕಂಡಿದ್ದೇವೆ. ಆದ್ರೆ ಉತ್ತರಕನ್ನಡ ಜಿಲ್ಲೆಯ ಗ್ರಾಮವೊಂದರ ಮಜಿರೆಯಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ  ಕೃತಕ ಪ್ರವಾಹ ಸೃಷ್ಟಿಯಾಗಿದೆ. ಅವೈಜ್ಞಾನಿಕವಾಗಿ ಮಾಡಿದ ಕಿರು ಸೇತುವೆಯಿಂದ ಇಲ್ಲಿನ ಕೃಷಿಭೂಮಿಗಳು ನೀರಿನಲ್ಲಿ ಮುಳುಗಿ ಹೋಗಿದ್ದು, ಮನೆಗಳಿಗೂ ಕೂಡ ನೀರು ನುಗ್ಗಿದೆ. ಹೌದು ಇದು ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಮುಂಡಳ್ಳಿಯಲ್ಲಿ ಕಂಡು ಬಂದ ದೃಶ್ಯ.
ಮುಂಡಳ್ಳಿಯ ಜಂತ್ರಕಂಠ ಬಳಿ ಕಿರುಸೇತುವೆ ಕಾಮಗಾರಿಯೊಂದನ್ನ ಮಾಡಲಾಗಿದೆ. ಸಂಬಂಧಪಟ್ಟ ಗುತ್ತಿಗೆದಾರ ಅವೈಜ್ಞಾನಿಕವಾಗಿ ತಮ್ಮಿಷ್ಟಕ್ಕೆ ಬಂದ ಹಾಗೆ ಕಾಮಗಾರಿ ಮಾಡಿರೋದ್ರಿಂದ ಈಗ ಇಲ್ಲಿನ ಜೋಗಿಮನೆ ಭಾಗದ ನಾಗರಿಕರು ಸಂಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದೆರಡು ದಿನಗಳ ಹಿಂದೆ ಮಳೆ ಸುರಿದಿರೋದ್ರಿಂದ ಇಲ್ಲಿನ ನಾಗರಿಕರಿಗೆ ಮುಳುಗಡೆ ಭೀತಿ ಎದುರಾಗಿದೆ.
ಊರಲೆಲ್ಲ ತುಂಬಿರುವ ನೀರಿನಿಂದಾಗಿ ಜನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕಾಲ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಬಹುತೇಕ ಜನರು ಮಲ್ಲಿಗೆಯ ಕೃಷಿಯನ್ನೆ ನಂಬಿ ಬದುಕು ಸಾಗಿಸುತ್ತಿದ್ದಾರೆ. ಅಲ್ಲದೇ ನೂರಾರು ಎಕರೆ ಜಮೀನಿನಲ್ಲಿ ಭತ್ತವನ್ನ ಬೆಳೆಯುತ್ತಾರೆ. ಕಳೆದ ಎರಡು ವಾರಗಳಿಂದ ಕೃಷಿ ಜಮೀನಿಗೆ ನೀರು ನುಗ್ಗಿದ್ದರಿಂದ ಮಲ್ಲಿಗೆಯ ಗಿಡಗಳ ಬುಡ ಕೊಳೆತು ಹೋಗಿದೆ. ಭತ್ತದ ಬೇಸಾಯ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಕೆಲವು ಮನೆಯೊಳಗೆ ಉಪ್ಪು ನೀರು ನುಗ್ಗಿದ್ದು ವಿಷ ಜಂತುಗಳು ಓಡಾಟ ನಡೆಸುತ್ತಿವೆ. ನಿವಾಸಿಗಳು ತಮ್ಮ ಮನೆಯಲ್ಲಿರುವ ವಯೋವೃದ್ಧರು, ಮಕ್ಕಳನ್ನು ಜೋಪಾನ ಮಾಡಲು ಹರಸಾಹಸ ಪಡುತ್ತಿದ್ದಾರೆ.
ಈ ಕಿರುಸೇತುವೆ ಕಾಮಗಾರಿ ನಿರ್ಮಿಸುವಲ್ಲಿ ಸಂಬಂಧಪಟ್ಟ ಗುತ್ತಿಗೆದಾರ ನಿರ್ಲಕ್ಷ್ಯ ಮಾಡಿದ್ದಾರೆ. ಇದರ ಪರಿಶೀಲನೆ ಮಾಡಬೇಕಾದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ನಿದ್ರೆಯಲ್ಲಿದ್ದಂತೆ ಕಂಡು ಬಂದಿದೆ. ಈಗಾಗಲೇ ಇಲ್ಲಿನ ನಾಗರಿಕರು ಹಲವು ಬಾರೀ ಕಿರುಸೇತುವೆ ಕಾಮಗಾರಿ ಮಾಡಿ ಮುಗಿಸಿ. ಇಲ್ಲದಿದ್ದಲ್ಲೆ ಜನರಿಗೆ ತೊಂದರೆಯಾಗುತ್ತೆ ಎಂದು ಹೇಳಿದ್ದರೂ ಆಲಸ್ಯ ಮಾಡಿದ್ದಾರೆ.
ಇಷ್ಟಾದ್ರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ಔದಾರ್ಯವನ್ನು ತೋರಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂಡಳ್ಳಿ ಪಂಚಾಯಿತಿ ವ್ಯಾಪ್ತಿಯ ಜೋಗಿಮನೆ ಮಜಿರೆಯೀಗ ಸಮುದ್ರದ ಉಪ್ಪು ನೀರು ಹಾಗೂ ಮಳೆ ನೀರಿನಿಂದ ಆವೃತ್ತವಾಗಿ ಕೃತಕ ನೆರೆ ಸೃಷ್ಟಿಯಾಗಿದೆ. ಒಂದು ಬದಿಯಲ್ಲಿ ಮುಂಡಳ್ಳಿ ಸಮುದ್ರ ಉಪ್ಪು ನೀರು, ಇನ್ನೊಂದು ಬದಿಯಲ್ಲಿ ಶರಾಬಿ ಹೊಳೆಯಿದೆ. ಯಾವಾಗ ಕಿರು ಸೇತುವೆ ಕಾಮಗಾರಿ ಮಾಡಿದರೋ ಅಂದಿನಿಂದ ಇಲ್ಲಿನ ಜನರ ಸಮಸ್ಯೆಯನ್ನು ಅನುಭವಿಸುವಂತಾಗಿದೆ.
ಮುಂಡಳ್ಳಿ ಗ್ರಾಮ ಬಹುದೂರದಲ್ಲೇನಿಲ್ಲ. ಪಟ್ಟಣ ಪ್ರದೇಶಕ್ಕೆ ಹೊಂದಿಕೊಂಡೆ ಈ ಗ್ರಾಮವಿದೆ. ಈ ಬಗ್ಗೆ ಶಾಸಕ ಸುನಿಲ್ ನಾಯ್ಕ್ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ. ಇನ್ನು ಮುಂದಾದರೂ ಸಂಬಂಧಪಟ್ಟವರು ಇಲ್ಲಿಗೆ ಬಂದು ನೈಜ ಪರಿಸ್ಥಿತಿ ಅರಿತು ಸ್ಥಳೀಯ ನಿವಾಸಿಗಳಿಗೆ ಉಂಟಾದ ಸಮಸ್ಯೆ ಬಗೆಹರಿಸಬೇಕಾಗಿದೆ. ಇಲ್ಲವಾದಲ್ಲಿ ಮಳೆ ಬಂದರೆ ಇಡೀ ಗ್ರಾಮ ಸಂಪೂರ್ಣ ನೀರಿನ ವಶವಾಗಲಿದೆ.

Comments

Leave a Reply

Your email address will not be published. Required fields are marked *