ಕೊಲೆಗೈದು ಅಪಘಾತವೆಂದು ಬಿಂಬಿಸಿದ್ದ ಹಂತಕ ಕೊನೆಗೂ ಪೊಲೀಸ್ ಬಲೆಗೆ

– ಕಷ್ಟ ಕಾಲದಲ್ಲಿ ಸಾಲ ಕೊಟ್ಟಿದ್ದ ಸ್ನೇಹಿತನ್ನೇ ಕೊಂದಿದ್ದ ಪಾಪಿ
– ಹೆಂಡತಿ ಜೊತೆ ಅನೈತಿಕ ಸಂಬಂಧದ ಗುಮ್ಮ

ಮಂಡ್ಯ: ಕಷ್ಟ ಕಾಲದಲ್ಲಿ ಸಾಲ ಕೊಟ್ಟಿದ್ದ ಗೆಳೆಯ ಬಡ್ಡಿ ಕೇಳಲು ಪದೇ ಪದೇ ಮನೆ ಬಳಿ ಬರುತ್ತಾನೆ. ನನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿರಬಹುದು ಎಂದು ಅನುಮಾನಿಸಿ ಸಿನಿಮೀಯ ರೀತಿಯಲ್ಲಿ ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೊಂಗಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪೊಲೀಸರ ತನಿಖೆಯ ಬಳಿಕ ಸತ್ಯಾಂಶ ಹೊರ ಬಿದ್ದಿದೆ. ಮೇ 22ರಂದು ಹೊಂಗಳ್ಳಿ ಸಮೀಪದ ರಸ್ತೆ ಪಕ್ಕದ ಹಳ್ಳದಲ್ಲಿ ವ್ಯಕ್ತಿಯೊಬ್ಬನ ಶವ ಹಾಗೂ ಆತನ ಬೈಕ್ ಪತ್ತೆಯಾಗಿತ್ತು. ನೋಡಿದವರಿಗೆ ಅಪಘಾತವೆಂಬಂತೆ ಕಾಣುತ್ತಿತ್ತಾದರೂ, ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್.ಎಸ್ ಠಾಣೆ ಪೊಲೀಸರಿಗೆ ರಸ್ತೆ ಮೇಲಿದ್ದ ರಕ್ತದ ಕಲೆ ಹಾಗೂ ಶವ ಬಿದ್ದಿದ್ದ ಸ್ಥಿತಿ ನೋಡುತ್ತಿದ್ದಂತೆ ಅಪಘಾತವಲ್ಲ, ಕೊಲೆ ಎಂಬ ಅನುಮಾನ ಬಂದಿತ್ತು.

ಮೃತಪಟ್ಟ ವ್ಯಕ್ತಿ ಹೊಂಗಳ್ಳಿ ಗ್ರಾಮದ ಅಶೋಕ್ ಎಂಬುದು ತಿಳಿಯುತ್ತಿದ್ದಂತೆ ತನಿಖೆ ಆರಂಭಿಸಿದ ಪೊಲೀಸರು, ಚಂದ್ರ (ಭೀಮ) ಹಾಗೂ ಶ್ರೀಧರ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರು. ಆರಂಭದಲ್ಲಿ ಕೊಲೆಗೂ ತಮಗೂ ಸಂಬಂಧವಿಲ್ಲ ಎನ್ನುತ್ತಿದ್ದ ಆರೋಪಿಗಳು, ಕೊನೆಗೆ ತಪ್ಪು ಒಪ್ಪಿಕೊಂಡು ತಾವೇ ಕೊಲೆ ಮಾಡಿದ್ದಾಗಿ ಹೇಳಿದ್ದಾರೆ.

ಆರೋಪಿಗಳು ಹಾಗೂ ಕೊಲೆಯಾದ ಅಶೋಕ್ ಮೂವರೂ ಹೊಂಗಳ್ಳಿ ಗ್ರಾಮದವರು. ಕಷ್ಟ ಸುಖದಲ್ಲಿ ಒಬ್ಬರಿಗೊಬ್ಬರು ನೆರವಿಗೆ ಬರುತ್ತಿದ್ದ ಸ್ನೇಹಿತರು. ಮೃತ ಅಶೋಕ್ ಬಳಿ ಚಂದ್ರ ಭೀಮ 50 ಸಾವಿರ ರೂ. ಸಾಲ ಪಡೆದಿದ್ದ. ಸರಿಯಾಗಿ ಬಡ್ಡಿ ಕಟ್ಟದಿದ್ದಾಗ ಪದೇ ಪದೇ ಮನೆಗೆ ಹೋಗಿ ತನ್ನ ಹಣ ಹಿಂದಿರುಗಿಸುವಂತೆ ಒತ್ತಡ ಹಾಕುತ್ತಿದ್ದ. ಅಶೋಕ ಮನೆಗೆ ಬರುವುದರಿಂದ ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿರಬಹುದು ಎಂದು ಆರೋಪಿ ಚಂದ್ರು ಶಂಕಿಸಿದ್ದ. ಅದೇ ಕಾರಣಕ್ಕೆ ತನ್ನ ಸ್ನೇಹಿತ ಶ್ರೀಧರ್ ಜೊತೆ ಸೇರಿ ಮೇ 21ರ ರಾತ್ರಿ ಕೊಲೆ ಮಾಡಿದ್ದಾನೆ.

ಕೊಲೆಗೂ ಮುನ್ನ ಮೃತ ಅಶೋಕ್, ಆರೋಪಿಗಳಾದ ಚಂದ್ರ ಹಾಗೂ ಶ್ರೀಧರ್ ಕೆಲವು ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದರು. ಬಳಿಕ ಅಲ್ಲಿಂದ ಹೊರಟ್ಟಿದ್ದ ಅಶೋಕ ಪಂಪ್ ಹೌಸ್ ನಲ್ಲಿ ಇನ್ನೊಬ್ಬ ಸ್ನೇಹಿತ ಉಮೇಶ್ ಜೊತೆ ಮಲಗಿದ್ದಾಗ ಅಲ್ಲಿಗೆ ಬಂದ ಆರೋಪಿಗಳು, ಜಗಳ ತೆಗೆದು ಹಲ್ಲೆ ನಡೆಸಿ, ಕೊನೆಗೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದರು. ಬಳಿಕ ಬೈಕ್ ಜೊತೆ ಶವವನ್ನು ರಸ್ತೆ ಪಕ್ಕದ ಹಳ್ಳಕ್ಕೆ ತಳ್ಳಿ ಅಪಘಾತದಿಂದ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದರು. ಆದರೆ ಪೊಲೀಸರು ಪ್ರಕರಣ ಬೇಧಿಸಿದ್ದು, ಕೊನೆಗೂ ಸಿಕ್ಕಿಬಿದ್ದಿದ್ದಾರೆ.

Comments

Leave a Reply

Your email address will not be published. Required fields are marked *