ಕೊರೊನಾದಿಂದ ಚೇತರಿಸಿಕೊಂಡಿದ್ರೂ ಅಣ್ಣನನ್ನು ವೈದ್ಯರೇ ಕೊಂದಿದ್ದಾರೆ – ಸಹೋದರ ಆರೋಪ

ಮಡಿಕೇರಿ: ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದರೂ ನಮ್ಮ ಅಣ್ಣನನ್ನು ವೈದ್ಯರೇ ಏನೋ ಮಾಡಿ ಕೊಂದಿದ್ದಾರೆ ಎಂದು ಮೃತ ಸೋಂಕಿತನ ಸಹೋದರ ಮತ್ತು ಆತನ ತಂದೆ ಗಂಭೀರ ಆರೋಪ ಮಾಡಿದ್ದಾರೆ.

ತಮ್ಮ ಅಣ್ಣನ ಸಾವಿನ ಸುದ್ದಿ ತಿಳಿದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ಗ್ರಾಮದಿಂದ, ಮಡಿಕೇರಿ ಕೋವಿಡ್ ಆಸ್ಪತ್ರೆ ಬಳಿಗೆ ಬಂದಿದ್ದ ಮೃತನ ಸಹೋದರ ಚಂದ್ರು ಮತ್ತು ಆತನ ತಂದೆ ಮಹದೇವ ಬಿಕ್ಕಿ ಬಿಕ್ಕಿ ಅತ್ತು ತಮ್ಮ ಮಗನನ್ನು ಉಳಿಸಿಕೊಡಿ, ತಮ್ಮ ಅಣ್ಣನನ್ನು ಉಳಿಸಿಕೊಡಿ ಎಂದು ಕಣ್ಣೀರು ಸುರಿಸಿದರು.

ಕಳೆದ ಸೋಮವಾರವಷ್ಟೇ ಮಗ ಮಂಜುವಿಗೆ ಜ್ವರ ತೀವ್ರವಾಗಿದೆ ಎಂದು ಕೂಡಿಗೆ ಆಸ್ಪತ್ರೆಯಿಂದ ನೇರವಾಗಿ ಮಡಿಕೇರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಬಳಿಕ ನನ್ನ ಮಗ ಚೇತರಿಸಿಕೊಂಡಿದ್ದ. ನಿತ್ಯವೂ ನಾನು ಆಸ್ಪತ್ರೆ ಬಳಿಗೆ ಬಂದು ನೀರು ಮತ್ತಿತರೆ ಅಗತ್ಯ ವಸ್ತುಗಳನ್ನು ಕೊಟ್ಟು ಹೋಗುತ್ತಿದ್ದೆ. ಆದರೆ ಇದ್ದಕ್ಕಿದ್ದ ಹಾಗೆ ನನ್ನ ಮಗ ಸತ್ತು ಹೋಗಿರುವುದಾಗಿ ವೈದ್ಯರು ಹೇಳುತ್ತಿದ್ದಾರೆ ಎಂದು ಮೃತ ಮಂಜು ಅವರ ತಂದೆ ಮಹದೇವ್ ಗಂಭೀರ ಆರೋಪ ಮಾಡಿದ್ದಾರೆ.

ಸಹೋದರ ಚಂದ್ರು ಮಾತನಾಡಿ, ನಮ್ಮ ಅಣ್ಣ ಸಂಪೂರ್ಣ ಗುಣಮುಖನಾಗಿದ್ದ. ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವುದಾಗಿ ವೈದ್ಯರೇ ನಿನ್ನೆ ಸಂಜೆ ಹೇಳಿದ್ದರು. ಆದರೆ ರಾತ್ರಿ 12 ಗಂಟೆಗೆ ಫೋನ್ ಮಾಡಿ ನಿಮ್ಮ ಅಣ್ಣ ಸತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆರೋಗ್ಯವಾಗಿದ್ದವರು ಹೇಗೆ ಇದ್ದಕ್ಕಿದ್ದ ಹಾಗೆ ಸಾವನ್ನಪ್ಪುವುದಕ್ಕೆ ಸಾಧ್ಯ. ಆತ ಆರೋಗ್ಯವಾಗಿದ್ದರು, ನಿನಗೆ ಉಸಿರಾಟದ ತೊಂದರೆ ಇದೆ ಎಂದು ನನ್ನನ್ನು ಐಸಿಯು ವಾರ್ಡ್‍ಗೆ ಹಾಕುತ್ತಿದ್ದಾರೆ ಎಂದು ಅಣ್ಣನೇ ಫೋನ್ ಮಾಡಿ ಹೇಳಿದ್ದ. ಹೀಗಾಗಿ ಅವನ ಸಾವು ಸಹಜ ಸಾವಲ್ಲ ವೈದ್ಯರು ಏನೋ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡರು.

Comments

Leave a Reply

Your email address will not be published. Required fields are marked *