ಕೊರೊನಾ ನೆಗೆಟಿವ್ ವರದಿ ಇಲ್ಲದೆ ಒಳಗೆ ಸೇರಿಸದ ಸಿಬ್ಬಂದಿ- ಆಸ್ಪತ್ರೆ ಆವರಣದಲ್ಲೇ ತುಂಬು ಗರ್ಭಿಣಿ ನರಳಾಟ

ಹಾಸನ: ಕೊರೊನಾ ವೈರಸ್ ನೆಗೆಟಿವ್ ರಿಪೋರ್ಟ್ ಇಲ್ಲದೆ ಒಳಗೆ ಸೇರಿಸದ ಪರಿಣಾಮ ತುಂಬು ಗರ್ಭಿಣಿಯೊಬ್ಬರು ಆಸ್ಪತ್ರೆಯ ಆವರಣದಲ್ಲಿಯೇ ನೋವಿನಿಂದ ಒದ್ದಾಡಿದ ಘಟನೆಯೊಂದು ಹಾಸನದಲ್ಲಿ ನಡೆದಿದೆ.

ಕೋವಿಡ್ ರಿಪೋರ್ಟ್ ಇಲ್ಲದೆ ಗರ್ಭಿಣಿ ಹೇಮಾ ಅಡ್ಮಿಷನ್ ಸಿಕ್ಕಿಲ್ಲ. ಹೀಗಾಗಿ ತುಂಬು ಗರ್ಭಿಣಿ ಶಾಂತಿಗ್ರಾಮ ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಹೆರಿಗೆ ನೋವಿನಿಂದ ನರಳಾಡಿದ್ದಾರೆ. ಕೂಗಾಡಿ ನರಳಾಡಿದರು ಆಸ್ಪತ್ರೆ ಸಿಬ್ಬಂದಿ ನೆರವಿಗೆ ಬರಲಿಲ್ಲ ಎಂದು ಗರ್ಭಿಣಿ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಹಾಸನ ತಾಲೂಕಿನ ಹಲಸಿನಹಳ್ಳಿ ಗ್ರಾಮದ ನಿವಾಸಿಯಾಗಿರುವ ಹೇಮಾ ಅವರು ರಾತ್ರಿ 11.30ಕ್ಕೆ ಹೆರಿಗೆಗೆಂದು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಕೋವಿಡ್ ನೆಗೆಟಿವ್ ವರದಿ ಕೇಳಿದ್ದಾರೆ. ಆದರೆ ಹೇಮಾ ಬಳಿ ರಿಪೋರ್ಟ್ ಇಲ್ಲದ ಕಾರಣ ಅವರನ್ನು ಆಸ್ಪತ್ರೆ ಒಳಗೆ ಸೇರಿಸಿಲ್ಲ. ಈ ಮೂಲಕ 24*7 ಹೆರಿಗೆ ಆಸ್ಪತ್ರೆಯಾದರೂ ಆರೋಗ್ಯ ಇಲಾಖೆ ಸಿಬ್ಬಂದಿ ಮಾನವೀಯತೆ ಮರೆತಿದ್ದಾರೆ.

ಇತ್ತ ಆಸ್ಪತ್ರೆ ಒಳಗಡೆ ಸೇರಿಸದ ಪರಿಣಾಮ ಹೇಮಾ ಅವರು ಹೊರಗಡೆ ನರಳಿ ನರಳಿ ಅಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಹೆರಿಗೆಯಾದ ಬಳಿಕ ಆಕೆಯ ಕುಟುಂಬದ ಸದಸ್ಯರು ಅಂಬುಲೆನ್ಸ್ ನಲ್ಲಿ ಮಗು ಹಾಗೂ ಹೇಮಾರನ್ನು ಹಾಸನಕ್ಕೆ ಕರೆದುಕೊಂಡು ಹೋಗಿದ್ದಾರೆ.

Comments

Leave a Reply

Your email address will not be published. Required fields are marked *