ಇನ್ಮುಂದೆ ಮನೆಯಲ್ಲೇ ಮಾಡ್ಬೋದು ಕೋವಿಡ್ ಟೆಸ್ಟ್ – ರಾಪಿಡ್ ಟೆಸ್ಟ್ ಕಿಟ್ ಬಳಕೆಗೆ ಐಸಿಎಂಆರ್ ಅನುಮತಿ

COVID-19

ನವದೆಹಲಿ: ಇನ್ನು ಮುಂದೆ ಮನೆಯಲ್ಲಿಯೇ ಕೋವಿಡ್ ಟೆಸ್ಟ್ ಮಾಡಿಕೊಳ್ಳಬಹುದು. ಮನೆಯಲ್ಲಿಯೇ ರಾಪಿಡ್ ಟೆಸ್ಟ್ ಕಿಟ್ ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಅನುಮೋದನೆ ನೀಡಿದೆ.

ಹೌದು. ಯಾವುದೇ ವೈದ್ಯಕೀಯ ಸಿಬ್ಬಂದಿಯಿಲ್ಲದೆ ನಮಗೆ ನಾವೇ ಟೆಸ್ಟ್ ಮಾಡಿಕೊಳ್ಳಬಹುದು. ಹಾಗಾದ್ರೆ ನಮಗೆ ನಾವೇ ಕೊರೊನಾ ಟೆಸ್ಟ್ ನಡೆಸುವುದು ಹೇಗೆ ಎಂಬ ಬಗ್ಗೆ ಐಸಿಎಂಆರ್ ‘ಕೊವಿಸೆಲ್ಫ್’ ಎಂಬ ಕಿಟ್ ಬಗ್ಗೆ ವಿವರಣೆ ನೀಡಿದೆ. ಈ ವಿಧಾನದ ಪರೀಕ್ಷೆಗೆ ಕೇವಲ ಮೂಗಿನ ದ್ರವ ಮಾತ್ರ ಅಗತ್ಯವಾಗಿದೆ.

ಕೊರೊನಾ ಪಾಸಿಟಿವ್ ದೃಢಪಟ್ಟ ರೋಗಿಗಳ ಜೊತೆ ನಿಕಟ ಸಂಪರ್ಕದಲ್ಲಿದ್ದವರು ಮನೆಯಲ್ಲಿಯೇ ರಾಪಿಡ್ ಆ್ಯಂಟಿಜನ್ ಟೆಸ್ಟ್ ಅನ್ನು ಕಿಟ್ ಬಳಸಿ ಮಾಡಬಹುದು. ಅದರಲ್ಲಿ ಪಾಸಿಟಿವ್ ದೃಢಪಟ್ಟರೆ ಮತ್ತೊಮ್ಮೆ ಪರೀಕ್ಷೆ ಮಾಡುವ ಅವಶ್ಯಕತೆ ಇಲ್ಲ. ಆದರೆ ನೆಗೆಟಿವ್ ರಿಪೋರ್ಟ್ ವರದಿ ಪಡೆದ ಬಳಿಕ ರೋಗಲಕ್ಷಣ ಹೊಂದಿರುವವರು ಕೂಡಲೇ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಗಾಗುವಂತೆ ಶಿಫಾರಸು ಮಾಡಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.

ಈ ಕಿಟ್ ಲಭ್ಯವಿದೆ ಎಂದು ಬೇಕಾಬಿಟ್ಟಿ ಬಳಕೆ ಮಾಡುವಂತಿಲ್ಲ. ಯಾರಲ್ಲಿ ಕೊರೊನಾ ಲಕ್ಷಣ ಇದೆ ಹಾಗೂ ಯಾರು ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆಯೋ ಅಂಥವರು ಮಾತ್ರ ಈ ವಿಧಾನದ ಮೂಲಕ ಕೋವಿಡ್ 19 ಟೆಸ್ಟ್ ಮಾಡಿಕೊಳ್ಳಬಹುದಾಗಿದೆ. ಕಿಟ್ ಬಳಸುವುದಕ್ಕಾಗಿ, ಬಳಕೆದಾರರಿಗೆ ಮೊಬೈಲ್ ಅಪ್ಲಿಕೇಶನ್ ಅಗತ್ಯವಿರುತ್ತದೆ. ಇದು ಪರೀಕ್ಷಾ ಕಾರ್ಯವಿಧಾನದ ಸಮಗ್ರ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ. ರೋಗಿಗೆ ಪಾಸಿಟಿವ್ ಅಥವಾ ನೆಗೆಟಿವ್ ರಿಪೋರ್ಟ್ ನೀಡುತ್ತದೆ.

Comments

Leave a Reply

Your email address will not be published. Required fields are marked *