ಆಕ್ಸಿಜನ್‍ನಿಂದ ಉಸಿರಾಡ್ತಲೇ ಹಾಡಿಗೆ ತಲೆದೂಗಿದ್ದ ದಿಟ್ಟ ಯುವತಿ ಸಾವಿಗೆ ಸೋನು ಸೂದ್ ಕಂಬನಿ

ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ನಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ. ಒಂದೆಡೆ ಅನೇಕ ಸಾವು-ನೋವುಗಳು ಸಂಭವಿಸಿದರೆ, ಇನ್ನೊಂದೆಡೆ ಮನಕಲಕುವ ಘಟನೆಗಳು ಕೂಡ ನಡೆದಿವೆ, ನಡೆಯುತ್ತಲೇ ಇವೆ. ಅಂಥದ್ದೇ ಒಂದು ಘಟನೆ ನವದೆಹಲಿಯ ಆಸ್ಪತ್ರೆಯೊಂದರಲ್ಲಿ ನಡೆದಿದ್ದು, ಇದೀಗ ದಿಟ್ಟ ಯುವತಿ ಸಾವಿಗೆ ಬಾಲಿವುಡ್ ನಟ ಸೋನು ಸೂದ್ ಕಂಬನಿ ಮಿಡಿದಿದ್ದಾರೆ.

ಹೌದು. ಇತ್ತೀಚೆಗೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ಕೊರೊನಾ ಸೋಂಕಿತೆಯೊಬ್ಬರು ದಾಖಲಾಗಿದ್ದರು. 30 ವರ್ಷದ ಯುವತಿಗೆ ಉಸಿರಾಟದ ಸಮಸ್ಯೆ ಎದುರಾಗಿದ್ದು, ಆಕ್ಸಿಜನ್ ಮೂಲಕ ಉಸಿರಾಡುತ್ತಿದ್ದರೂ ಆಕೆ ‘ಲವ್ ಯೂ ಜಿಂದಗಿ..’ ಹಾಡಿಗೆ ಆರಾಮಾಗಿಯೇ ತಲೆದೂಗಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ ಈ ವೀಡಿಯೋಗೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಆದರೆ ಯುವತಿ ಮೇ 13ರಂದು ಇಹಲೋಕ ತ್ಯಜಿಸಿದ್ದರು. ಇದೀಗ ಯುವತಿ ಸಾವಿಗೆ ಸೋನ್ ಸೂದ್ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

ಟ್ವೀಟ್‍ನಲ್ಲೇನಿದೆ..?
ಈ ಸಾವು ತುಂಬಾ ದುಃಖ ತಂದಿದೆ. ತನ್ನ ಕುಟುಂಬವನ್ನು ನಾನು ಮತ್ತೆಂದು ನೋಡಲು ಸಾಧ್ಯವಿಲ್ಲ ಎಂಬುದಾಗಿ ಆಕೆ ಕನಸಲ್ಲೂ ಊಹೆ ಕೂಡ ಮಾಡಿರಲಿಲ್ಲ. ಇದು ನಿಜಕ್ಕೂ ಅನ್ಯಾಯದ ಸಾವಾಗಿದೆ. ಬದುಕಲು ಅರ್ಹವಾದ ಎಷ್ಟೋ ಜೀವಗಳು ಇಂದು ನಮ್ಮ ಕಣ್ಣಮುಂದೆಯೇ ಕಳೆದುಹೋಗಿವೆ. ನಮ್ಮ ಜೀವನ ಎಷ್ಟೇ ನಾರ್ಮಲ್ ಆಗಿದ್ದರೂ, ಈ ಹಂತದಿಂದ ಹೊರಬರಲು ನಮಗೆ ಎಂದಿಗೂ ಸಾಧ್ಯವಾಗುವುದಿಲ್ಲ ಎಂದು ಹೇಳುವ ಮೂಲಕ ನಟ ಕಂಬನಿ ಮಿಡಿದಿದ್ದಾರೆ.

ವೈರಲ್ ವೀಡಿಯೋ:
ಇತ್ತೀಚೆಗೆ ದೆಹಲಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಡಾ. ಮೋನಿಕಾ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ 30 ವರ್ಷದ ಯುವತಿಯೊಬ್ಬರು ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟು ಚಿಕಿತ್ಸೆ ಪಡೆಯುತ್ತಿರುತ್ತಾರೆ. ಆಕ್ಸಿಜನ್ ಸಹಾಯದಿಂದ ಉಸಿರಾಡುತ್ತಿದ್ದ ಯುವತಿ, ‘ಲವ್ ಯೂ ಜಿಂದಗಿ..’ ಹಾಡಿಗೆ ಕೈ ಅಲ್ಲಾಡಿಸುತ್ತಾ ತಲೆದೂಗುತ್ತಿದ್ದರು. ಈ ವೀಡಿಯೋ ಅನೇಕ ಸೋಂಕಿತರಿಗೆ ಸ್ಫೂರ್ತಿ ಆಗಿತ್ತು. ಜೊತೆಗೆ ಯುವತಿಯ ವೀಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಬೇಗ ಗುಣವಾಗಲಿ ಎಂದು ಹಾರೈಸಿದ್ದರು. ಆದರೆ ಅಂತಿಮವಾಗಿ ಅದ್ಯಾವುದೂ ಕೂಡ ಫಲಿಸಲಿಲ್ಲ. ಇದೀಗ ಯುವತಿಯ ಸಾವಿಗೆ ದೇಶಾದ್ಯಂತ ಜನ ಕಂಬನಿ ಮಿಡಿಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *