ಬಸವರಾಜ ಬೊಮ್ಮಾಯಿ ಮನೆಯ ಆವರಣದಲ್ಲಿ ಕೋವಿಡ್ ಕೇರ್ ಸೆಂಟರ್

ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಅರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆಯೂ ಸಹ ಹೆಚ್ಚಾಗುತ್ತಿವೆ. ಆದರೆ ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಜಿಲ್ಲಾಉಸ್ತುವಾರಿ ಬಸವರಾಜ ಬೊಮ್ಮಾಯಿ ಮನೆಯ ಆವರಣದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿ 50 ಹಾಸಿಗೆಗಳ ವ್ಯವಸ್ಥೆ ಮಾಡಿದ್ದಾರೆ.

ಉಸಿರಾಟದ ಸಮಸ್ಯೆಯಿಂದ ಬಳಲುವ ಕೋವಿಡ್ ಸೋಂಕಿತರ ಪ್ರಾಣ ಕಾಪಾಡುವ 25 ಆಕ್ಸಿಜನ್ ಕನ್ಸೆಂಟ್ರೇಟರ್‌ಗಳನ್ನು ಶಿಗ್ಗಾಂವಿ ಸಾರ್ವಜನಿಕ ಆಸ್ಪತ್ರೆಗೆ ಬಸವರಾಜ್ ಬೊಮ್ಮಾಯಿ ಹಸ್ತಾಂತರಿಸಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ಕೋವಿಡ್ ಸ್ಥಿತಿಗತಿ ಮತ್ತು ತಾಲೂಕು ಆಸ್ಪತ್ರೆಯಲ್ಲಿ ಮಾಡಲಾದ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಆಕ್ಸಿಜನ್ ಕನ್ಸೆಂಟ್ರೇಟರ್‌ಗಳನ್ನು ಶಿಗ್ಗಾಂವಿ ತಾಲೂಕು ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಉಸಿರಾಟದ ಸಮಸ್ಯೆ ಆಗುತ್ತಿದ್ದಂತೆಯೇ ರೋಗಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಲು ಆರಂಭವಾಗುತ್ತದೆ. ಆದ್ದರಿಂದ ಅಂಥವರಿಗೆ ತಕ್ಷಣ ಆಕ್ಸಿಜನ್ ನೀಡಬೇಕಾದ ಅಗತ್ಯ ಎದುರಾಗುತ್ತದೆ. ಅಂಥವರಿಗಾಗಿಯೇ ಆಕ್ಸಿಜನ್ ಕನ್ಸೆಂಟ್ರೇಟರ್‌ಗಳನ್ನು ವಿತರಿಸಲಾಗುತ್ತಿದೆ. ವೈದ್ಯರು ಸಮಯೋಚಿತವಾಗಿ ಸೋಂಕಿತರಿಗೆ ಆಕ್ಸಿಜನ್ ನೀಡುವ ಮೂಲಕ ಅವರ ಜೀವ ರಕ್ಷಣೆ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸವಣೂರಿನ ವೈದ್ಯಾಧಿಕಾರಿಗಳಾದ ಹಿರೇಗೌಡರ, ರಾಜಶೇಖರ ಮೂಲಿಮನಿ ಉಪಸ್ಥಿತರಾಗಿದ್ದರು. ಜಿಲ್ಲಾ ಪಂಚಾಯತಿಯ ಸಿ.ಇ.ಓ ಮಹ್ಮದ್ ರೋಷನ್, ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ, ಸೇರಿದಂತೆ ಶಿಗ್ಗಾಂವ- ಸವಣೂರಿನ ತಹಶೀಲ್ದಾರರು ಸಚಿವರ ಜೊತೆಗಿದ್ದರು.

Comments

Leave a Reply

Your email address will not be published. Required fields are marked *