ಖಾಸಗಿ ಆಸ್ಪತ್ರೆಗಳು ಮಾನವೀಯ ದೃಷ್ಟಿಯಿಂದ ಸೋಂಕಿತರಿಗೆ ಚಿಕಿತ್ಸೆ ನೀಡಲಿ: ಶೆಟ್ಟರ್

ಧಾರವಾಡ: ಕೊರೊನಾ ಸೋಂಕಿತರಿಂದ ಹೆಚ್ಚು ಹಣ ಪಡೆಯಬೇಡಿ ಎಂದು ಖಾಸಗಿ ಆಸ್ಪತ್ರೆಗಳಿಗೆ ಸಾಕಷ್ಟು ಬಾರಿ ತಿಳಿಸಿದ್ದೇವೆ. ಆದರೂ ಅವರಿಗೆ ಅರ್ಥ ಆಗುತ್ತಿಲ್ಲ. ಆಸ್ಪತ್ರೆಯವರು ಕೊರೊನಾ ಸೋಂಕಿತರಿಗೆ ಮಾನವೀಯ ದೃಷ್ಟಿಯಿಂದ ಚಿಕಿತ್ಸೆ ನೀಡಲಿ ಎಂದು ಖಾಸಗಿ ಆಸ್ಪತ್ರೆಗಳ ವಿರುದ್ಧ ಸಚಿವ ಜಗದೀಶ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಖಾಸಗಿ ಆಸ್ಪತ್ರೆಯವರಿಗೆ ಸಾಕಷ್ಟು ಹೇಳಿದ್ದೇವೆ. ಹೆಚ್ಚು ಬೆಲೆ ತೆಗೆದುಕೊಳ್ಳಬೇಡಿ ಎಂದು ಹಲವು ಬಾರಿ ತಿಳಿಸಿದ್ದೇವೆ. ಇಷ್ಟಾದ ಮೇಲೂ ಖಾಸಗಿ ಆಸ್ಪತ್ರೆಯವರು ಮಾನವೀಯತೆ ದೃಷ್ಟಿಯಿಂದ ನೋಡಬೇಕಲ್ವಾ? ಇಂತಹ ಸಮಯದಲ್ಲಿಯೂ ದುಬಾರಿ ಹಣ ತೆಗೆದುಕೊಳ್ಳುವುದು ಹೇಗೆ ಮತ್ತು ಹೆಚ್ಚು ದರ ತೆಗೆದುಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

ಸರ್ಕಾರದ ಕಡೆಯಿಂದ ಖಾಸಗಿಯವರು ಪದೇ ಪದೇ ಹೇಳಿಸಿಕೊಳ್ಳುವಂತೆ ಆಗಬಾರದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಒಂದು ಕಡೆ ನಡೆಯುತ್ತಿದೆ. ಮೊದಲು ಜನರ ಜೀವ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಕೇಸ್ ಹೆಚ್ಚಳವಾದರೆ ಧಾರವಾಡದಲ್ಲೂ ಆಕ್ಸಿಜನ್ ಕೊರತೆ ಎದುರಾಗಲಿದ್ದು, ಬೆಡ್ ಹೆಚ್ಚಾದಂತೆ ಆಕ್ಸಿಜನ್ ತೊಂದರೆ ಆಗುತ್ತದೆ. ಆ ಹಿನ್ನೆಲೆಯಲ್ಲಿ ತಯಾರಿ ಮಾಡಿಕೊಂಡಿದ್ದೇವೆ. 900ಕ್ಕೂ ಹೆಚ್ಚು ರೋಗಿಗಳು ಕಿಮ್ಸ್ ನಲ್ಲೇ ಇದ್ದಾರೆ. ಇನ್ನೂ ಹೆಚ್ಚು ಬೆಡ್ ಕ್ರಿಯೇಟ್ ಮಾಡಿದ್ರೆ ಆಕ್ಸಿಜನ್ ತೊಂದರೆ ಆಗುವ ಸಾಧ್ಯತೆ ಇದೆ. ಹೀಗಾಗಿ ತಾಲೂಕು ಆಸ್ಪತ್ರೆಗಳ ವೆಂಟಿಲೇಟರ್ ಕಿಮ್ಸ್ ಗೆ ಅಳವಡಿಸುತ್ತೇವೆ, ತಾಲೂಕು ಪ್ರದೇಶದಲ್ಲಿ ಸರ್ಕಾರದಿಂದ ಕೊಟ್ಟ ವೆಂಟಿಲೇಟರ್ ಇವೆ, ಅಲ್ಲಿ ಬಳಕೆಯಾಗದಿದ್ದಲ್ಲಿ ಕಿಮ್ಸ್‍ಗೆ ಉಪಯೋಗಿಸಲು ಸಲಹೆ ಕೊಟ್ಟಿದ್ದೇನೆ ಎಂದು ಮಾಹಿತಿ ನೀಡಿದರು.

Comments

Leave a Reply

Your email address will not be published. Required fields are marked *