ಕೊರೊನಾ ಸೋಂಕಿತರಿಗಾಗಿ ಅಂಬುಲೆನ್ಸ್ ಚಾಲಕನಾದ ‘ಯುವರತ್ನ’ ನಟ ಅರ್ಜುನ್

ಬೆಂಗಳೂರು: ಮಹಾಮಾರಿ ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಸೆಲೆಬ್ರಿಟಿಗಳು ತಮ್ಮದೇ ಆದ ರೀತಿಯಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಆದರೆ ನಟ ಅರ್ಜುನ್ ಗೌಡ ಮಾತ್ರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

ಹೌದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಹಾಗೂ ‘ರುಸ್ತುಂ’ ಚಿತ್ರದಲ್ಲಿ ನಟಿಸಿರುವ ಅರ್ಜುನ್ ಗೌಡ ಸದ್ಯ ಅಂಬುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ಸೋಂಕಿತರಿಗಾಗಿ ಅರ್ಜುನ್ ಗೌಡ ಅಂಬುಲೆನ್ಸ್ ಚಾಲಕರಾಗಿದ್ದಾರೆ.

ಕೊರೊನಾದಂತಹ ಮಹಾಮಾರಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ಅಂಬುಲೆನ್ಸ್, ಬೆಡ್ ಸಿಗದೆ ಜನ ಪರದಾಡುತ್ತಿದ್ದಾರೆ. ಹೀಗಾಗಿ ಕೊರೊನಾ ಸಂಕಷ್ಟದ ಸಮಯದಲ್ಲಿ ಅರ್ಜುನ್ ಗೌಡ ಅವರು ಸಹಾಯ ಕೋರಿದವರ ಪಾಲಿಗೆ ನೆರವಾಗಲು ಮುಂದಾಗಿದ್ದಾರೆ.

ಕೊರೋನಾ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಹಾಗೂ ಕೊರೊನಾಗೆ ಬಲಿಯಾದವರ ಮೃತದೇಹಗಳನ್ನು ಸಾಗಿಸುವ ಆಂಬ್ಯುಲೆನ್ಸ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಅರ್ಜುನ್ ಸೇವಾ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಅರ್ಜುನ್, ನಾನು ಈಗಾಗಲೇ ಹಲವಾರು ಮಂದಿಯ ಅಂತ್ಯಕ್ರಿಯ ಮಾಡುವ ಮೂಲಕ ಸಹಾಯ ಮಾಡಿದ್ದೇನೆ. ಅಗತ್ಯವಿರುವವರಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ. ಇತ್ತೀಚೆಗೆ ಕೆಂಗೇರಿಯಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲೆಮದು ವೈಟ್ ಫೀಲ್ಡ್ ಗೆ ಕರೆದುಕೊಂಡು ಹೋಗಿದ್ದೆ. ಸದ್ಯದ ಪರಿಸ್ಥಿತಿ ತುಂಬಾ ಹದಗೆಟ್ಟಿರುವ ಕಾರಣ ನನ್ನ ಈ ಸೇವೆಯನ್ನು ಎರಡು ತಿಂಗಳ ಕಾಲು ಮುಂದುವರಿಸುಲು ನಿರ್ಧರಿಸಿರುವುದಾಗಿ ಅರ್ಜುನ್ ಹೇಳಿದ್ದಾರೆ.

ಒಟ್ಟಿನಲ್ಲಿ ಕಳೆದ ಬಾರಿ ಲಾಕ್‍ಡೌನ್ ಆಗಿದ್ದಾಗ ಹಲವು ಸ್ಟಾರ್ ನಟರು ಸಂಕಷ್ಟಕ್ಕೀಡಾದವರಿಗೆ ಊಟ, ಆಹಾರ ಕಿಟ್ ಒದಗಿಸಿದ್ದರು. ನಟ ದಿಗಂತ್ ಬೈಕ್ ನಲ್ಲಿ ಡೆಲಿವರಿ ಬಾಯ್ ರೀತಿ ಔಷಧಗಳನ್ನು ಹೋಂ ಡೆಲಿವರಿ ಮಾಡುವ ಮೂಲಕ ಗಮನ ಸೆಳೆದಿದ್ದರು.

Comments

Leave a Reply

Your email address will not be published. Required fields are marked *