ಸೋಂಕಿತರ ಚಿಕಿತ್ಸೆ ಬಗ್ಗೆ ತಪ್ಪು ಮಾಹಿತಿ- ಶೇ.50ರಷ್ಟು ಹಾಸಿಗೆ ಮೀಸಲಿಡದ ಹುಬ್ಬಳ್ಳಿಯ 3 ಆಸ್ಪತ್ರೆಗಳಿಗೆ ನೋಟಿಸ್

ಧಾರವಾಡ: ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಹಾಸಿಗೆಗಳ ಪೈಕಿ ಶೇ.50ರಷ್ಟನ್ನು ಕಡ್ಡಾಯವಾಗಿ ಕೋವಿಡ್ ಚಿಕಿತ್ಸೆಗಾಗಿ ಮೀಸಲಿಡಲು ಧಾರವಾಡ ಜಿಲ್ಲಾಡಳಿತ ಏಪ್ರಿಲ್ 15ರಂದು ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳ ಸಭೆ ನಡೆಸಿ ನಿರ್ದೇಶನ ನೀಡಿತ್ತು. ಆದರೆ ಆಸ್ಪತ್ರೆಗಳು ತಪ್ಪು ಮಾಹಿತಿ ನೀಡುತ್ತಿದ್ದು, 3 ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

ಸರ್ಕಾರದ ಆದೇಶ ಉಲ್ಲಂಘಿಸಿರುವ ಹುಬ್ಬಳ್ಳಿಯ ಪ್ರಮುಖ ಮೂರು ಆಸ್ಪತ್ರೆಗಳಿಗೆ ಸಾಂಕ್ರಾಮಿಕ ರೋಗ ಕಾಯ್ದೆ-1987 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ-2005 ರನ್ವಯ 24 ಗಂಟೆಯಲ್ಲಿ ಉತ್ತರ ನೀಡುವಂತೆ ತಿಳಿಸಿ, ಆರೋಗ್ಯ ಇಲಾಖೆಯಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಹುಬ್ಬಳ್ಳಿಯ ಶಕುಂತಲಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ 75 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, 31 ಜನ ಕೋವಿಡ್ ದೃಢಪಟ್ಟವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯವರು ತಿಳಿಸಿದ್ದರು. ಅದೇ ರೀತಿ ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‍ನಲ್ಲಿ ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ 26 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, 26 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಆಸ್ಪತ್ರೆಯಿಂದ ಮಾಹಿತಿ ನೀಡಲಾಗಿತ್ತು. ತತ್ವದರ್ಶಾ ಆಸ್ಪತ್ರೆ 150 ಹಾಸಿಗೆಗಳಿಗೆ ಅನುಮತಿ ಪಡೆದಿದ್ದು, ಇದರಲ್ಲಿ ಶೇ.50 ರಷ್ಟು ಅಂದರೆ 75 ಹಾಸಿಗೆಗಳನ್ನು ಕೋವಿಡ್-19 ಸೋಂಕಿತರಿಗೆ ಮೀಸಲಿಡಬೇಕು.

ತತ್ವದರ್ಶಾ ಆಸ್ಪತ್ರೆಯವರು ಕೋವಿಡ್-19 ದೃಢಪಟ್ಟ ಪ್ರಕರಣಗಳ ಲ್ಯಾಬೋರೇಟರಿ ಫಲಿತಾಂಶ ಇಲ್ಲದೆ ಕೋವಿಡ್-19 ಪ್ರಕರಣಗಳೆಂದು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುವುದು ಕಂಡು ಬಂದಿದೆ. ಈ ಮೂರು ಆಸ್ಪತ್ರೆಗಳಲ್ಲಿ ಸರ್ಕಾರದ ನಿರ್ದೇಶನದಂತೆ ಕೋವಿಡ್ ಚಿಕಿತ್ಸೆಗಾಗಿ ಸರ್ಕಾರದ ನಿರ್ದೇಶನದ ಸ್ಪಷ್ಟ ಉಲ್ಲಂಘನೆ ಕಂಡುಬಂದ ಹಿನ್ನೆಲೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *