ಲಾಕ್‍ಡೌನ್ ವೇಳೆ ಅನಗತ್ಯ ಓಡಾಟ- ಕೋಲಾರದಲ್ಲಿ 200ಕ್ಕೂ ಹೆಚ್ಚು ಬೈಕ್ ವಶಕ್ಕೆ

ಕೋಲಾರ: ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೂ ಕೆಲವರು ಅನಗತ್ಯವಾಗಿ ಸಂಚರಿಸಿದ್ದು, ಪೊಲೀಸರು ಎಲ್ಲೆಡೆ ಬಂದೋಬಸ್ತ್ ಮಾಡಿದ್ದರು. ಹೀಗಾಗಿ ವಾಹನ ಸೀಜ್ ಮಾಡುವ ಮೂಲಕ ಬಿಸಿ ಮುಟ್ಟಿಸುತ್ತಿದ್ದಾರೆ.

ಜಿಲ್ಲೆಯ ಮಾಲೂರು ಪೊಲೀಸರು ಅನಗತ್ಯವಾಗಿ ಓಡಾಡುತ್ತಿದ್ದ ನೂರಕ್ಕೂ ಹೆಚ್ಚು ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಕೋಲಾರ ನಗರ ಪೊಲೀಸರು 26 ಬೈಕ್ ಗಳು ಹಾಗೂ ಜಿಲ್ಲೆಯ ವಿವಿಧೆಡೆ ಒಟ್ಟು 200ಕ್ಕೂ ಹೆಚ್ಚು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯಲ್ಲಿ ಕರ್ಫ್ಯೂ ಜಾರಿ ಇದ್ದರೂ ಅನಗತ್ಯವಾಗಿ ಓಡಾಡುತ್ತಿದ್ದ ಬೈಕ್ ಸವಾರರಿಗೆ ಪೊಲೀಸರ ಪುಲ್ ಡ್ರಿಲ್ ನಡೆಸಿದ್ದಾರೆ.

ಸರ್ಕಾರ ಸ್ಪಷ್ಟವಾಗಿ ಹೇಳಿದೆ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಮನೆಯಿಂದ ಹೊರಬರಬೇಕು, ಉಳಿದಂತೆ ಮನೆಯಲ್ಲಿಯೇ ಇದ್ದು, ಕೊರೊನಾ 2ನೇ ಅಲೆ ತಡೆಯುವಂತೆ ಮನವಿ ಮಾಡಲಾಗಿದೆ. ಆದರೂ ಕೆಲವರು ಸುಖಾಸುಮ್ಮನೆ ಬೈಕ್ ಗಳಲ್ಲಿ ಸಂಚರಿಸುತ್ತಿದ್ದರು, ಇಂತಹವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಬೈಕ್‍ಗಳಿಗಾಗಿ ಜನ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದು, ಎಲ್ಲೆಡೆ ಕಂಡು ಬಂತು.

ಡಿಸಿ, ಎಸ್‍ಪಿ ಸಿಟಿ ರೌಂಡ್ಸ್

ಡಿಸಿ ಡಾ.ಆರ್.ಸೆಲ್ವಮಣಿ ಹಾಗೂ ಎಸ್‍ಪಿ ಕಾರ್ತಿಕ್ ರೆಡ್ಡಿ ಖುದ್ದು ನಗರ ಪ್ರದಕ್ಷಿಣೆ ಹಾಕಿ ಲಾಕ್‍ಡೌನ್ ಪರಿಶೀಲನೆ ನಡೆಸಿದರು. ನಗರದ ನಗರದ ಅಮ್ಮವಾರಿಪೇಟೆ, ಎಂಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚಿರಿಸಿ, ಪರಿಶೀಲನೆ ನಡೆಸಿದರು.

ಅನ್ಯಗತ್ಯವಾಗಿ ಓಡಾಟ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಡಿಸಿ ಸೆಲ್ವಮಣಿ, ಎಲ್ಲ ಕಡೆ ಬ್ಯಾರಿಕೇಡ್ ಹಾಕಿ ನಾಕಾಬಂಧಿ ಮಾಡುವಂತೆ ಸೂಚಿಸಿದರು. ಕೋಲಾರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಇದೇ ವೇಳೆ ಮನವಿ ಮಾಡಿದರು. ನಗರದಲ್ಲಿ ಪ್ರದಕ್ಷಿಣೆ ಹಾಕಿ ಬಂದೋ ಬಸ್ತ್ ಪರಿಶೀಲನೆ ನಡೆಸಿದ ಎಸ್ಪಿ ಕಾರ್ತಿಕ್ ರೆಡ್ಡಿ, ಅನಗತ್ಯವಾಗಿ ಓಡಾಟ ನಡೆಸಿದ ಬೈಕ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

Comments

Leave a Reply

Your email address will not be published. Required fields are marked *