ಕೇಂದ್ರಕ್ಕೆ 150 ರೂ., ರಾಜ್ಯಕ್ಕೆ 400 ರೂ.- ವ್ಯಾಕ್ಸಿನ್ ಬೆಲೆಯಲ್ಲಿ ತಾರತಮ್ಯಕ್ಕೆ ಕಾಂಗ್ರೆಸ್ ಪ್ರಶ್ನೆ

ನವದೆಹಲಿ: ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಅನುಮತಿ ನೀಡಿದೆ. ಇದರ ಜೊತೆಗೆ ಸೀರಮ್ ಇನ್ಸಿಟ್ಯೂಟ್ ತನ್ನ ಕೋವಿಶೀಲ್ಡ್ ಲಸಿಕೆಯ ಬೆಲೆಯನ್ನ ಸಹ ಘೋಷಣೆ ಮಾಡಿದೆ. ಸೀರಂ ಸಂಸ್ಥೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬೇರೆ ಬೇರೆ ಬೆಲೆಯಲ್ಲಿ ಲಸಿಕೆ ನೀಡುತ್ತಿರೋದು ಯಾಕೆ ಎಂದು ಕಾಂಗ್ರೆಸ್ ನಾಯಕ ಜಯರಾಮ್ ರಮೇಶ್ ಪ್ರಶ್ನೆ ಮಾಡಿದ್ದಾರೆ.

ಕೋವಿಶೀಲ್ಡ್ ಪ್ರತಿ ಡೋಸ್‍ಗೆ 150 ರೂ.ನಂತೆ ಕೇಂದ್ರ ಸರ್ಕಾರಕ್ಕೆ ನೀಡುತ್ತಿದೆ. ಆದ್ರೆ ರಾಜ್ಯ ಸರ್ಕಾರ ಪ್ರತಿ ಡೋಸ್ ಗೆ 400 ರೂ. ನೀಡಲು ಸೀರಂ ಮುಂದಾಗಿದೆ. ಈ ಧೋರಣೆ ರಾಜ್ಯ ಸರ್ಕಾರಗಳ ಆರ್ಥಿಕ ಪರಿಸ್ಥಿತಿಗೆ ಹೊಡೆತ ಬೀಳಲಿದೆ. ಆದ್ದರಿಂದ ಲಸಿಕೆಯನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒಂದೇ ಬೆಲೆಗೆ ನೀಡಬೇಕು ಎಂದು ಜಯರಾಮ್ ರಮೇಶ್ ಮನವಿ ಮಾಡಿಕೊಂಡಿದ್ದಾರೆ.

ಬುಧವಾರ ಸೀರಂ ಸಂಸ್ಥೆ ಖಾಸಗಿ ಆಸ್ಪತ್ರೆ ಮತ್ತು ರಾಜ್ಯ ಸರ್ಕಾರಗಳಿಗೆ ನೀಡುವ ಕೊರೊನಾ ಲಸಿಕೆ ಕೋವಿಶೀಲ್ಡ್ ಬೆಲೆಯನ್ನ ಘೋಷಣೆಯನ್ನ ಮಾಡಿಕೊಂಡಿತ್ತು. ಪ್ರತಿ ಡೋಸ್‍ಗೆ ರಾಜ್ಯ ಸರ್ಕಾರಕ್ಕೆ 400 ರೂ ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ. ನಿಗದಿ ಮಾಡಿತ್ತು. ವ್ಯಾಕ್ಸಿನ್ ಅಭಿಯಾನದ ನೂತನ ಹಂತದಲ್ಲಿ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಕಂಪನಿಗಳು ನೇರವಾಗಿ ಲಸಿಕೆಯನ್ನ ಉತ್ಪಾದಕರಿಂದ ಖರೀದಿಸಲು ಅನುಮತಿ ಕಲ್ಪಿಸಿದೆ.

ಮಂದಗತಿಯ ಲಸಿಕಾ ಅಭಿಯಾನದ ವಿರುದ್ಧ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಭಾರತ ವಿಶ್ವದಲ್ಲಿಯೇ ಅತಿ ದೊಡ್ಡ ವ್ಯಾಕ್ಸಿನ್ ಉತ್ಪದನಾ ದೇಶ. ಆದ್ರೆ ಇಲ್ಲಿಯವರೆಗೆ ದೇಶದ ಜನಸಂಖ್ಯೆಯ ಶೇ.1.3 ಜನರಿಗೆ ಲಸಿಕೆ ನೀಡಲಾಗಿದೆ. ನಮ್ಮ ದೇಶದ ಜನರಿಗೆಯೇ ಕೊರೊನಾ ಲಸಿಕೆ ಕೊರತೆ ಉಂಟಾಗಿದೆ ಎಂದು ಕಾಂಗ್ರೆಸ್ ನಾಯಕ ಅಜಯ್ ಮಕಾನ್ ಆಕ್ರೋಶ ಹೊರ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *