ನಿಮ್ಮ ಆರೋಗ್ಯದ ವಿಚಾರದಲ್ಲಿ ನಿಮಗೇ ಅಸಡ್ಡೆ ಯಾಕೆ- ಉಡುಪಿ ಡಿಸಿ ಪ್ರಶ್ನೆ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದ್ದು, ಪ್ರತಿ ದಿನ ನೂರರ ಮೇಲೆ ಕೇಸ್ ದಾಖಲಾಗುತ್ತಿವೆ. ಜನ ಕೋವಿಡ್ ಮಾರ್ಗಸೂಚಿ ಪಾಲಿಸದೆ ಓಡಾಡುತ್ತಿರುವುದರಿಂದ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಸ್ಕ್ ಹಾಕದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರದ ಹೊರಭಾಗದಲ್ಲಿ ರೈಡ್ ಗೆ ಇಳಿದ ಡಿಸಿ, ಉಡುಪಿ ತಾಲೂಕಿನ ಸಂತೆಕಟ್ಟೆ ಬ್ರಹ್ಮಾವರದಲ್ಲಿ ಮಾಸ್ಕ್ ಹಾಕದವರಿಗೆ ದಂಡ ವಿಧಿಸಿದ್ದಾರೆ. ಖಾಸಗಿ ಬಸ್ ಗಳಿಂದ ನಿಯಮ ಉಲ್ಲಂಘನೆಯಾಗುತ್ತಿದ್ದು, ಪೀಕ್ ಹವರ್ ನಲ್ಲಿ ಬಸ್ ಗಳು ತುಂಬಿ ತುಳುಕುತ್ತಿರುತ್ತವೆ. ಬಸ್ ಗಳನ್ನು ತಡೆದು ದಂಡ ಹಾಕಿದ ಅಧಿಕಾರಿಗಳು, ಚಾಲಕ ಹಾಗೂ ನಿರ್ವಾಹಕರ ಮೇಲೆ ಕ್ರಿಮಿನಲ್ ಕೇಸ್ ಹಾಕುವ ಎಚ್ಚರಿಕೆ ನೀಡಿದ್ದಾರೆ.

ನಿಂತು ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ ಡಿಸಿ, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಂಗಡಿ ಮಾಲೀಕರು, ಮೆಡಿಕಲ್, ಬ್ಯಾಂಕ್ ಗಳ ಮೇಲೆ ಡಿಸಿ 5 ಸಾವಿರ ದಂಡ ಹಾಕಿದ್ದಾರೆ. ಮಾಸ್ಕ್ ಹಾಕದ ಸಾರ್ವಜನಿಕರ ಮೇಲೆ 100 ರೂಪಾಯಿ ದಂಡ ವಿಧಿಸಿದ್ದಾರೆ. ಬಸ್ ನಿಂದ ಕೆಳಗಿಳಿಸಿ ತೆರಳಿದ ಜಿಲ್ಲಾಧಿಕಾರಿ ವಿರುದ್ಧ ವಿದ್ಯಾರ್ಥಿನಿಯರು ಅಸಮಧಾನ ವ್ಯಕ್ತಪಡಿಸಿದರು. ಹೆಚ್ಚುವರಿ ಪ್ರಯಾಣಿಕರನ್ನು ಕರೆದುಕೊಂಡು ಹೋದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಯಾಣಿಕರು ಯಾವುದೇ ಕಾರಣಕ್ಕೂ ನಿಂತು ಪ್ರಯಾಣ ಮಾಡಬಾರದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಜಿಲ್ಲಾಧಿಕಾರಿ ಮಾಧ್ಯಮಗಳ ಜೊತೆ ಮಾತನಾಡಿ, ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದರೂ ಜನ ಮಾರ್ಗಸೂಚಿ ಪಾಲಿಸುತ್ತಿಲ್ಲ. ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿದ್ದರೂ ಅಸಡ್ಡೆ ಯಾಕೆ? ಸಾಂಕ್ರಾಮಿಕ ರೋಗ ಹತೋಟಿಗೆ ಬರುವ ತನಕ ಜಾಗರೂಕರಾಗಿರಿ ಎಂದರು.

ಗ್ರಾಮೀಣ ಭಾಗಕ್ಕೆ ಕಡಿಮೆ ಸಂಖ್ಯೆಯಲ್ಲಿ ಬಸ್ ಇದೆ. ಕಾಲೇಜು ಬಿಡುವ ಸಂದರ್ಭದಲ್ಲಿ ಸಿದ್ಧಾಪುರ ರಸ್ತೆಯಲ್ಲಿ ಒಂದೇ ಬಸ್ ಇದೆ. ಹೀಗಾಗಿ ತುಂಬಿದ ಬಸ್ ನಲ್ಲೇ ಓಡಾಡಬೇಕಾಗುತ್ತದೆ. ಬಸ್ ನಿಂದ ಇಳಿಸಿದರೆ ಎಲ್ಲಿಗೆ ಹೋಗಬೇಕು ಎಂದು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *