ಪುರಾತತ್ವ ಇಲಾಖೆಯಿಂದ ಪ್ರವಾಸಿ ತಾಣಗಳು ಬಂದ್- ಚಿತ್ರದುರ್ಗದ ಕೋಟೆ ಖಾಲಿ ಖಾಲಿ

ಚಿತ್ರದುರ್ಗ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರ ವಿವಿಧ ವಲಯಗಳಿಗೆ ನಿರ್ಬಂಧ ಹೇರಿದ್ದು, ಕೇಂದ್ರ ಪುರಾತತ್ವ ಇಲಾಖೆಯಿಂದ ಪ್ರವಾಸಿ ತಾಣಗಳನ್ನೂ ಬಂದ್ ಮಾಡಲಾಗಿದೆ. ಹೀಗಾಗಿ ಏಳು ಸುತ್ತಿನ ಕೋಟೆ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ.

ಕೋಟೆನಾಡು ಚಿತ್ರದುರ್ಗದ ಏಳು ಸುತ್ತಿನ ಕೋಟೆಗೆ ಬರುವ ಪ್ರವಾಸಿಗರಿಗೆ ಮೇ 15 ರವೆರೆಗೆ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ದೂರದ ಊರುಗಳಿಂದ ಐತಿಹಾಸಿಕ ಹಿನ್ನೆಲೆಯ ಕೋಟೆಯ ಸೊಬಗು ಸವಿಯಲು ಇಂದು ಚಿತ್ರದುರ್ಗಕ್ಕೆ ಆಗಮಿಸಿದ್ದ ಪ್ರವಾಸಿಗರಲ್ಲಿ ಭಾರೀ ನಿರಾಸೆ ಮೂಡಿಸಿದೆ. ಅಲ್ಲದೆ ಪ್ರತಿ ಶುಕ್ರವಾರ ಕೋಟೆಯಲ್ಲಿರುವ ಏಕನಾಥೇಶ್ವರಿ ದೇವತೆಗೆ ವಿಶೇಷ ಪೂಜೆ ನೆರೆವೇರಿಸಲು ಆಗಮಿಸುತಿದ್ದ ಭಕ್ತರಿಗೂ ಕೂಡ ಕೋಟೆಯೊಳಗೆ ಬಿಡದೇ ಅಧಿಕಾರಿಗಳು ನಿಷೇಧ ಹೇರಿದ್ದಾರೆ.

ಇದರಿಂದಾಗಿ ಕೋಟೆಯನ್ನು ವೀಕ್ಷಿಸಲು ಬಂದಿದ್ದ ಪ್ರವಾಸಿಗರು ಹಾಗೂ ಭಕ್ತರಲ್ಲಿ ಭಾರೀ ಬೇಸರ ಮೂಡಿದೆ. ಕೋವಿಡ್ ನಿಯಮಾವಳಿಗಳ ಪಾಲನೆಯೊಂದಿಗೆ ಕೋಟೆ ಪ್ರವೇಶಕ್ಕೆ ಅನುಮತಿ ನೀಡಿದ್ದರೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವನ್ನು ಪ್ರವಾಸಿಗರು ವ್ಯಕ್ತಪಡಿಸಿದ್ದಾರೆ.

ಕೇವಲ ಏಳು ಸುತ್ತಿನ ಕೋಟೆ ಮಾತ್ರವಲ್ಲ ಮೊಳಕಾಲ್ಮೂರು ತಾಲೂಕಿನ ಅಶೋಕನ ಶಿಲಾಶಾಸನವಿರುವ ಅಶೋಕ ಸಿದ್ದಾಪುರಕ್ಕೂ ನಿರ್ಬಂಧ ವಿಧಿಸಲಾಗಿದೆ. ಗುಹಾಂತರ ದೇವಾಲಯ, ಚಂದ್ರವಳ್ಳಿ ಪ್ರದೇಶಕ್ಕೂ ನಿಷೇಧ ಹೇರಲಾಗಿದ್ದು, ಇಂದಿನಿಂದಲೇ ಪ್ರವಾಸಿ ಧಾಮಗಳು ಬಂದ್ ಆಗಿವೆ ಎಂದು ಚಿತ್ರದುರ್ಗ ಪುರಾತತ್ವ ಇಲಾಖೆ ಅಧಿಕಾರಿ ಕಿಶೋರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *