ಚಾಮರಾಜನಗರದಲ್ಲಿ ರೆಮ್‍ಡಿಸಿವಿರ್ ಕೊರತೆ ಇದೆ: ಸುರೇಶ್ ಕುಮಾರ್

– ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಗಳು ನಡೆಯುತ್ತವೆ

ಚಾಮರಾಜನಗರ: ಕೊರೊನಾ ಸೋಂಕಿತರಿಗೆ ನೀಡುವ ರೆಮ್‍ಡಿಸಿವಿರ್ ಚುಚ್ಚುಮದ್ದಿನ ಕೊರತೆ ಇದೆ ಎಂಬ ಚರ್ಚೆ ನಡೆಯುತ್ತಿರುವಾಗಲೇ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಅಚಿವರೂ ಆಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಜಿಲ್ಲೆಯ ಹನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ನೀಡುವ ರೆಮ್ ಡಿಸಿವಿರ್ ಚುಚ್ಚುಮದ್ದು ಕೊರತೆ ಇದೆ. ಇನ್ನು ಮೂರ್ನಾಲ್ಕು ದಿನಗಳಿಗಾಗುವಷ್ಟು ಮಾತ್ರ ನಮ್ಮಲ್ಲಿ ಸ್ಟಾಕ್ ಇದೆ. ಅಗತ್ಯ ಸಂಖ್ಯೆಯ ರೆಮ್ ಡಿಸಿವಿರ್ ಚುಚ್ಚು ಮದ್ದು ಕಳಿಸಿಕೊಡುವಂತೆ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳನ್ನು ಕೇಳಿದ್ದೇನೆ. ರೆಮ್ ಡೆಸಿವಿರ್‍ಗೆ ಪರ್ಯಾಯವಾಗಿ ಮತ್ತೊಂದು ಚುಚ್ಚುಮದ್ದು ಬಂದಿದೆ ಎಂಬ ಮಾಹಿತಿ ಇದೆ. ಆದಷ್ಟು ಬೇಗ ಸ್ಟಾಕ್ ಪೂರೈಸುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಈಗಿನ ಪರಿಸ್ಥಿತಿ ನೋಡಿದರೆ ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಗಳು ನಡೆಯುತ್ತವೆ. ಆದರೆ ಮಾರ್ಗಸೂಚಿಗಳ ಬಗ್ಗೆ ಆರೋಗ್ಯ ಇಲಾಖೆಯ ಸಲಹೆ ಕೇಳಿದ್ದೇವೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಿಗದಿಯಾಗಿರುವುದು ಜೂನ್ 21 ಕ್ಕೆ, ಇನ್ನೂ ಎರಡು ತಿಂಗಳು ಸಮಯವಿದೆ. ಹೀಗಾಗಿ ಆಗಿನ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು. ಆದರೆ ಈಗಿನ ಪರಿಸ್ಥಿತಿಗೆ ಹೇಳುವುದಾದರೆ ಪರೀಕ್ಷೆಗಳು ನಡೆಯುತ್ತವೆ. ಪರೀಕ್ಷೆ ನಡೆಸಲು ಕಳೆದ ವರ್ಷ ನೀಡಿದ್ದ ಎಸ್‍ಒಪಿಯನ್ನೇ ಅಳವಡಿಸಬೇಕೆ, ಇನ್ನೂ ಏನಾದರು ಸುಧಾರಣೆ ಮಾಡಬೇಕೆ ಎಂದು ಆರೋಗ್ಯ ಇಲಾಖೆಯ ಸಲಹೆ ಕೇಳಿದ್ದೇವೆ. ಅವರು ನೀಡಿದ ಎಸ್‍ಒಪಿ ಪ್ರಕಾರ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಪರೀಕ್ಷೆ ನಡೆಸುವಂತೆ ಎಲ್ಲ ಕಡೆಯಿಂದ ಒತ್ತಾಯ ಬರುತ್ತಿದೆ. ಸಭಾಪತಿ ಬಸವರಾಜ್ ಹೊರಟ್ಟಿ ಸಹ ಪರೀಕ್ಷೆ ನಡೆಸುವಂತೆ ಪತ್ರ ಬರೆದಿದ್ದಾರೆ. ಪರೀಕ್ಷೆ ಆರಂಭವಾಗುವ ದಿನಾಂಕ ಇನ್ನೂ ಎರಡು ತಿಂಗಳ ಮೇಲಿದೆ. ಆಗಿಂದ್ದಾಗ್ಗೆ ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. 1 ರಿಂದ 9ನೇ ತರಗತಿಗಳಿಗೆ ಪರೀಕ್ಷೆ ನಡೆಸಬೇಕೆ ಬೇಡವೇ ಎಂಬ ಬಗ್ಗೆ ನಿನ್ನೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ಅಂತಿಮ ತೀರ್ಮಾನ ಪ್ರಕಟಿಸುತ್ತೇವೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *