ಆರನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ – ಇಂದು ತಟ್ಟೆ ಲೋಟ ಚಳವಳಿಗೆ ಸಿಬ್ಬಂದಿ ಪ್ಲಾನ್

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಆರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸಹ ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್ ಗಳು ರಸ್ತೆಗಿಳಿಯಲ್ಲ. ಭಾನುವಾರ ಶೇ.20ರಷ್ಟು ಬಸ್‍ಗಳು ಸೇವೆಯನ್ನು ಆರಂಭಿಸಿವೆ. ಉತ್ತರ ಕರ್ನಾಟಕದಲ್ಲೂ ಅತಿ ಹೆಚ್ಚು ಬಸ್ ಸಂಚಾರ ನಡೆಸುತ್ತಿವೆ.

ಭಾನುವಾರ ಸುದ್ದಿಗೋಷ್ಠಿ ನಡೆಸಿದ ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಮುಷ್ಕರ ಮುಂದುವರಿಯುತ್ತೆ. ರಾಜ್ಯಾದ್ಯಂತ ನೌಕರರ ಕುಟುಂಬಸ್ಥರು ತಟ್ಟೆ-ಲೋಟ ಹಿಡಿದು ವಿಶೇಷ ಚಳವಳಿ ಮಾಡ್ತೇವೆ. ಈ ಮುಷ್ಕರಕ್ಕೆ ಸಿಎಂ ಯಡಿಯೂರಪ್ಪ ಅವರೇ ಜವಾಬ್ದಾರಿ. ಎಸ್ಮಾ ಜಾರಿ ಮಾಡ್ತಾರಾ..? ಮಾಡ್ಲಿ ನೋಡೋಣ. ಅಲ್ಲದೆ ಜಿದ್ದಾಜಿದ್ದಿ ಬೇಡ. ಮುಕ್ತವಾಗಿ ಮಾತುಕತೆ ನಡೆಸಿ ಅಂತ ಮನವಿ ಮಾಡಿದ್ದಾರೆ.

ಸಾರಿಗೆ ನೌಕರರ ಮುಷ್ಕರದ ಶಿಕ್ಷೆಯಾಗಿ ಭಾನುವಾರ ಬಿಎಂಟಿಸಿಯಲ್ಲಿ 122 ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ನೋಟಿಸ್ ನೀಡಿದ್ರೂ ಕಾರಣ ನೀಡದೆ ಕರ್ತವ್ಯಕ್ಕೆ ಗೈರಾದ ಹಿನ್ನೆಲೆಯಲ್ಲಿ 62 ಟ್ರೈನಿ, 62 ಪ್ರೊಬೆಷನರಿ ನೌಕರರನ್ನು ವಜಾ ಮಾಡಲಾಗಿದೆ. ಖಾಸಗಿ ಹಾಗೂ ಸರ್ಕಾರಿ ಬಸ್‍ಗಳ ನಡುವೆ ಪೈಪೋಟಿ ಶುರುವಾಗಿದೆ. ಮುಷ್ಕರವನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್‍ಗಳು ಮೆಜೆಸ್ಟಿಕ್‍ನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಹಗಲು ದರೋಡೆಗಿಳಿದಿವೆ. ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪೀಕ್ತಿರುವ ಖಾಸಗಿ ಬಸ್ ಚಾಲಕರನ್ನು ಯಾರೂ ಕೇಳದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪ್ರಯಾಣಿಕರು ಪೊಲೀಸರಿಗೆ ದೂರು ಕೊಟ್ಟರೆ ಅಂತಹವರನ್ನು ಬಸ್‍ಗಳಿಗೆ ಹತ್ತಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

Comments

Leave a Reply

Your email address will not be published. Required fields are marked *