ಸೈಕಲ್‍ನಲ್ಲಿ ತೆರಳಿ ವೋಟ್ ಹಾಕಿದ್ದಕ್ಕೆ ವಿಜಯ್ ಸ್ಪಷ್ಟನೆ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸ್ಟಾರ್ ನಟ ವಿಜಯ್ ಸೈಕಲ್ ನಲ್ಲಿ ತೆರಳಿ ವೋಟ್ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಸ್ವತಃ ನಟನೆ ಈ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ವೋಟ್ ಮಾಡಿ ಮನೆಗೆ ತೆರಳುವಾಗಲೂ ನಟನಿಗೆ ಅಭಿಮಾನಿಗಳಿಂದ ಕಿರಿಕಿರಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅವರು ಮಾಧ್ಯಮಗಳಿಗೆ ಕೂಡ ಹೇಳಿಕೆ ನೀಡದೆ ಸ್ನೇಹಿತರ ಬೈಕಿನಲ್ಲಿ ಮನೆಗೆ ವಾಪಸ್ಸಾಗಿದ್ದರು. ನಂತರ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ ನಟ, ನನ್ನ ಮತಗಟ್ಟೆ ತುಂಬಾ ಇಕ್ಕಟ್ಟಾದ ಸ್ಥಳದಲ್ಲಿದೆ. ಹೀಗಾಗಿ ಅಲ್ಲಿಗೆ ಕಾರಿನಲ್ಲಿ ತೆರಳಲು ಸಾಧ್ಯವಿಲ್ಲವಾಯಿತು. ಅಲ್ಲದೆ ಪಾರ್ಕಿಂಗ್ ಸಮಸ್ಯೆ ಕೂಡ ಉಂಟಾಗಬಹುದು ಎಂದು ಸೈಕಲ್ ನಲ್ಲಿ ತೆರಳಿ ವೋಟ್ ಹಾಕಿ ಬಂದೆ. ಆದರೆ ಇದರ ಹಿಂದೆ ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ನಟ ವಿಜಯ್ ಅವರು ನಿನ್ನೆ ಸೈಕಲ್‍ನಲ್ಲಿ ಚೆನ್ನೈನ ನೀಲಾಂಕರೈನಲ್ಲಿರುವ ವೆಲ್ಸ್ ಇಂಟರ್ ನ್ಯಾಷನಲ್ ಪ್ರೀ ಸ್ಕೂಲ್ ಮತಗಟ್ಟೆಗೆ ಬಂದಿದ್ದರು. ಈ ವೇಳೆ ಅಭಿಮಾನಿಗಳು ವಿಜಯ್ ಅವರ ಜೊತೆಯಲ್ಲಿ ಫೋಟೋ ಮತ್ತು ವೀಡಿಯೋವನ್ನು ಕ್ಲಿಕ್ಕಿಸಿಕೊಂಡಿದ್ದು, ಈ ಫೋಟೋ ಹಾಗೂ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿದ್ದವು.

ಅಲ್ಲದೆ ಹಲವರು ಹಲವು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿರುವುದನ್ನು ಖಂಡಿಸಿ ವಿಜಯ್ ಸೈಕಲ್ ನಲ್ಲಿ ತೆರಳಿ ವೋಟ್ ಹಾಕಿದ್ದಾರೆ. ಈ ಮೂಲಕ ಬೆಲೆ ಏರಿಕೆಯನ್ನು ವಿಜಯ್ ಸಾಂಕೇತಿಕವಾಗಿ ಖಂಡಿಸಿದ್ದಾರೆ ಎಂದು ಭಾರೀ ಚರ್ಚೆಗೀಡಾಗಿತ್ತು.

Comments

Leave a Reply

Your email address will not be published. Required fields are marked *