ರಾಯರ ದರ್ಶನಕ್ಕೆ ಹೊರಟ ಪುನೀತ್, ಜಗ್ಗೇಶ್

ಬೆಂಗಳೂರು: ಯುವರತ್ನ ಸಿನಿಮಾ ತಂಡದ ಮೂವರು ಹಾಗೂ ಜಗ್ಗೇಶ್ ಒಟ್ಟಾಗಿ ಸೇರಿ ಮಂತ್ರಾಲಯದ ರಾಯರ ದರ್ಶನವನ್ನು ಮಾಡಲು ಹೋಗಿರುವ ಫೋಟೋವನ್ನು ನವರಸನಾಯಕ ಜಗ್ಗೇಶ್ ಟ್ವೀಟ್‍ನಲ್ಲಿ ಹಂಚಿಕೊಂಡಿದ್ದಾರೆ.

ಮಂತ್ರಾಲಯ ರಾಯರ ಬೃಂದಾವನದ ದರ್ಶನಕ್ಕೆ ಸಹೋದರ ಪುನೀತ್, ಸಂತೋಷ್ ಆನಂದ್ ರಾಮ್, ಕಾರ್ತಿಕ್ ಜೊತೆ ಹೊರಟಿದ್ದೇನೆ. ಶುಭದಿನ ಶುಭೋದಯ.. ಎಂದು ಬರೆದುಕೊಂಡು ಕಾರಿನಲ್ಲಿ ಕುಳಿತಿರುವ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಯಾದ ಒಂದೇ ದಿನಕ್ಕೆ ಕೊರೊನಾ ಕಾರಣದಿಂದಾಗಿ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 50% ಸೀಟು ಭರ್ತಿಗೆ ನಿಯಮ ಮಾಡಿತ್ತು. ಈ ವಿಚಾರದಿಂದ ನೊಂದು ಇಡೀ ಚಿತ್ರರಂಗವೇ ಸರ್ಕಾರದ ವಿರುದ್ಧ ತಿರುಗಿ ಬಿತ್ತು. ಅಲ್ಲದೆ ಪುನೀತ್, ಪ್ರಶಾಂತ್ ನೀಲ್ ಸೇರಿದಂತೆ ಯುವರತ್ನ ತಂಡ ಸಿಎಂ ಭೇಟಿಯಾಗಿ ಮನವಿ ಮಾಡಿಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಏಪ್ರಿಲ್ 7ರವರೆಗೆ ಶೇ.100 ರಷ್ಟು ಆಸನ ವ್ಯವಸ್ಥೆಗೆ ಸರ್ಕಾರ ಅನುಮತಿ ನೀಡಿತ್ತು. ಈ ಎಲ್ಲಾ ವಿಚಾರಗಳಿಂದ ನಿಟ್ಟುಸಿರುಬಿಟ್ಟ ಯುವರತ್ನ ಸಿನಿಮಾ ತಂಡ ಇದೀಗ ಮಂತ್ರಾಲಯದ ರಾಯರ ದರ್ಶನ ಮಾಡಲು ಹೊರಟಿದೆ.

ಪುನೀತ್ ರಾಜ್‍ಕುಮಾರ್, ನಿರ್ದೇಶಕ ಸಂತೋಷ್ ಆನಂದ್‍ರಾಮ್ ಹಾಗೂ ಹೊಂಬಾಳೆ ಫಿಲ್ಮ್‍ಂ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹಾಗೂ ಜೊತೆಯಲ್ಲಿ ಜಗ್ಗೇಶ್ ಅವರು ರಾಯರ ದರ್ಶನಕ್ಕೆ ಹೋಗಿರುವುದು ವಿಶೇಷವಾಗಿದೆ.

Comments

Leave a Reply

Your email address will not be published. Required fields are marked *