ಸಿಡಿ ಕೇಸ್ ಸ್ಥಳ ಮಹಜರು ಆರಂಭ – ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸ್ಥಳ ಮಹಜರು ಆರಂಭಗೊಂಡಿದೆ.

ಆರಂಭದಲ್ಲಿ ಯುವತಿ ತಂಗಿದ್ದ ಆರ್‌ಟಿ ನಗರ ಪಿಜಿಯಲ್ಲಿ ಸ್ಥಳ ಮಹಜರು ನಡೆಯುತ್ತಿದ್ದು, ಬಳಿಕ ಮಲ್ಲೇಶ್ವರ ಬಳಿ ಇರುವ ಮಂತ್ರಿ ಅಪಾರ್ಟ್‍ಮೆಂಟ್‍ನಲ್ಲಿ ಮಹಜರು ಪ್ರಕ್ರಿಯೆ ನಡೆಯಲಿದೆ.

ವಿಚಾರಣೆ ಸಂದರ್ಭದಲ್ಲಿ ಯಾವುದೇ ಪ್ರಕರಣದಲ್ಲಿ ಸಂತ್ರಸ್ತರ ಬಳಿ ಕೃತ್ಯ ನಡೆದ ಸ್ಥಳ, ಭೇಟಿ ನೀಡಿದ್ದು ಯಾವಾಗ? ಆ ಸ್ಥಳ ಹೇಗಿತ್ತು.. ಇತ್ಯಾದಿ ಪ್ರಶ್ನೆಗಳನ್ನು ಪೊಲೀಸರು ಕೇಳುತ್ತಾರೆ. ಸಂತ್ರಸ್ತರು ಈ ಬಗ್ಗೆ ಪರಿಪೂರ್ಣವಾದ ವಿವರಗಳನ್ನು ನೀಡಬೇಕಾಗುತ್ತದೆ. ನೀಡಿದ ವಿವರಗಳು ಸರಿ ಇದ್ಯಾ? ದಿನಾಂಕ ಸರಿ ಇದ್ಯಾ? ಎಲ್ಲ ವಿವರಗಳು ತಾಳೆ ಆಗುತ್ತಾ ಎಂಬುದನ್ನು ಪರಿಶೀಲಿಸಲು ಸ್ಥಳ ಮಹಜರು ನಡೆಸುತ್ತಾರೆ.

ಯುವತಿ ಸೂಚಿಸುವ ಸ್ಥಳ, ಮಾಹಿತಿ ಮೇರೆಗೆ ಮಹಜರು ನಡೆಯಲಿದೆ. ಮೆಟಿರಿಯಲ್ ಸಾಕ್ಷ್ಯ, ಡಿಜಿಟಲ್ ಸಾಕ್ಷ್ಯ, ಲೈವ್ ಎವಿಡೆನ್ಸ್ ಹೀಗೆ ಒಟ್ಟು ಮೂರು ವಿಭಾಗಗಳಲ್ಲಿ ಸ್ಥಳ ಮಹಜರು ಪ್ರಕ್ರಿಯೆ ನಡೆಯುತ್ತದೆ.

ಮೆಟರಿಯಲ್ ಸಾಕ್ಷ್ಯ:
ಕೃತ್ಯ ನಡೆದ ಸ್ಥಳದಲ್ಲಿನ ಸಾಕ್ಷಗಳನ್ನು ಸಂಗ್ರಹಿಸಲಾಗುತ್ತದೆ. ಘಟನೆ ನಡೆದ ಜಾಗದಲ್ಲಿ ದೈಹಿಕ ಸಂಪರ್ಕ ದ ವೇಳೆ ಬಳಸಿದ ಡಿಎನ್‍ಎ ಸ್ಯಾಂಪಲ್ ಪತ್ತೆ ಮಾಡಲಾಗುತ್ತದೆ. ಅದರಲ್ಲಿ ಕೂದಲು, ದೈಹಿಕ ಸಂಪರ್ಕದ ವೇಳೆ ಬಳಕೆಯಾದ ವಸ್ತುಗಳ ಮೂಲಕ ಸ್ಯಾಂಪಲ್ ಸಂಗ್ರಹಿಸಲಾಗುತ್ತದೆ.

ಲೈವ್ ಸಾಕ್ಷ್ಯ:
ಕೃತ್ಯ ನಡೆದಿರುವ ಆ ಜಾಗದಲ್ಲಿ ಪ್ರತ್ಯಕ್ಷ ಸಾಕ್ಷಿಗಳಿದ್ದರೆ ಸಿಬ್ಬಂದಿ ಅಥವಾ ಸೆಕ್ಯೂರಿಟಿ ಅಥವಾ ಯಾವುದೇ ವ್ಯಕ್ತಿಗಳಿದ್ದರೆ ಅವರ ಹೇಳಿಕೆಯನ್ನು ದಾಖಲಿಸಲಾಗುತ್ತದೆ.

ಡಿಜಿಟಲ್ ಸಾಕ್ಷ್ಯ:
ಡಿಜಿಟಲ್ ಸಾಕ್ಷ್ಯವಾಗಿ ಆಗಮನ, ನಿರ್ಗಮನದ ಸಿಸಿಟಿವಿ ಫುಟೇಜ್ ಸಂಗ್ರಹಿಸಲಾಗುತ್ತದೆ. ಇಬ್ಬರು ಇಬ್ಬರ ಮೊಬೈಲ್ ಒಂದೇ ಟವರ್ ಲೊಕೇಷನ್‍ನಲ್ಲಿತ್ತಾ  ಎಂಬದನ್ನು ಕಲೆ ಹಾಕಲಾಗುತ್ತದೆ.

Comments

Leave a Reply

Your email address will not be published. Required fields are marked *