ಕಾವೇರಿ ನದಿಯಲ್ಲಿ ಅಕ್ರಮವಾಗಿ ಕಾಟೇಜ್ ನಿರ್ಮಾಣ – ಸ್ಥಳೀಯರಿಂದ ಆಕ್ರೋಶ

ಮಡಿಕೇರಿ : ಯಾವುದೇ ನದಿದಂಡೆಯಿಂದ 100 ಅಡಿ ದೂರದವರೆಗೆ ಕೃಷಿ ಚಟುವಟಿಕೆಯನ್ನೂ ಮಾಡುವಂತಿಲ್ಲ. ಆದರೆ ಕೊಡಗಿನಲ್ಲಿ ಕಾವೇರಿ ನದಿಯನ್ನೇ ಒತ್ತುವರಿ ಮಾಡಿಕೊಂಡು ರೆಸಾರ್ಟ್ ಗಳನ್ನು ನಿರ್ಮಿಸಿರುವ ಪ್ರಕರಣವೊಂದು ಜಿಲ್ಲೆಯ ಕುಶಾಲನಗರದ ಕಾವೇರಿ ನಿಸರ್ಗಧಾಮದ ಬಳಿ ಬೆಳಕಿಗೆ ಬಂದಿದೆ.

ಅಬ್ದುಲ್ ಸಲಾಂ ಎಂಬವರು ಕಾವೇರಿ ನದಿಗೆ ತಡೆಗೋಡೆಯನ್ನು ನಿರ್ಮಿಸಿ ರೆಸಾರ್ಟಿನ ಕಾಟೇಜ್ ಗಳನ್ನು ನಿರ್ಮಿಸಿದ್ದಾರೆ. ಯಾವುದೇ ನದಿಯ ಹೈಫ್ಲೆಡ್ ಲೆವೆಲ್ ನಿಂದ 100 ಅಡಿಯವರೆಗಿನ ಜಾಗ ನದಿಯ ಬಫರ್ ಝೋನ್ ಆಗಿರುತ್ತದೆ. ಆ ಜಾಗದಲ್ಲಿ ಯಾವುದೇ ಚಟುವಟಿಕೆಯನ್ನು ನಡೆಸುವಂತಿಲ್ಲ. ಆದರೆ ಅಬ್ದುಲ್ ಸಲಾಂ, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ತಮ್ಮ 103/3, 104/2 ಮತ್ತು 104/3 ಸರ್ವೇ ನಂಬರ್ ಜಾಗದ ಜೊತೆಗೆ ಕಾವೇರಿ ನದಿಯನ್ನು ಒತ್ತುವರಿ ಮಾಡಿ ತಡೆಗೋಡೆಗಳನ್ನು ನಿರ್ಮಿಸಿದ್ದಾರೆ. ಜೊತೆಗೆ ಅದರ ಪಕ್ಕದಲ್ಲೇ ರೆಸಾರ್ಟ್ ಕಟ್ಟಡವನ್ನು ನಿರ್ಮಿಸಿದ್ದಾರೆ. ಇನ್ನು ಕೆಲವು ಕಟ್ಟಡಗಳನ್ನು ನಿರ್ಮಿಸುತ್ತಲೇ ಇದ್ದಾರೆ. ಕಾವೇರಿ ನದಿ ನೀರು ಅಬ್ದುಲ್ ಸಲಾಂ ಅವರು ನಿರ್ಮಿಸಿರುವ ತಡೆಗೋಡೆಗೆ ಇಂದಿಗೂ ಸಂಪೂರ್ಣ ನೀರು ತಾಗಿಕೊಂಡೇ ಹರಿಯುತ್ತಿದೆ.

ಕಾವೇರಿ ನದಿಯ ಬಫರ್ ಝೋನ್ ಜಾಗವು ಒತ್ತುವರಿಯಾಗಿದೆ ಎಂದು ದೂರು ಬಂದಿರುವುದಾಗಿ 2018 ಕ್ಕೂ ಮೊದಲೇ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಪಿಡಿಓ ಅಧಿಕಾರಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಜೀವನ್ ಎಂಬ ಸರ್ವೇ ಅಧಿಕಾರಿ ಪರಿಶೀಲನೆ ನಡೆಸಿ ಯಾವುದೇ ಜಾಗ ಒತ್ತುವರಿಯಾಗಿಲ್ಲ. ನದಿಯ ಬಫರ್ ಝೋನ್ ಜಾಗ ಹಾಗೆಯೇ ಇದೆ ಎಂದು ಸೋಮವಾರಪೇಟೆ ತಹಶೀಲ್ದಾರ್ ಅವರಿಗೆ ವರದಿ ನೀಡಿದ್ದಾರೆ. ಬಳಿಕ ತಹಶೀಲ್ದಾರ್ ಅವರು ಕೂಡ ಸ್ಥಳ ಪರಿಶೀಲನೆ ಮಾಡದೆಯೇ ಜಾಗವು ಯಾವುದೇ ಒತ್ತುವರಿಯಾಗಿಲ್ಲ ಎಂದು ದೃಢೀಕರಿಸಿದ್ದಾರೆ. ಕಾವೇರಿ ನದಿಯ ಬಫರ್ ಝೋನ್ ಜಾಗವು ಒತ್ತುವರಿಯಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದ್ದರೂ, ಸರ್ವೇ ಅಧಿಕಾರಿಗಳು ಮತ್ತು ತಹಶೀಲ್ದಾರ್ ಒತ್ತುವರಿಯಾಗಿಲ್ಲ ಎಂದು ವರದಿ ನೀಡಿರುವುದರ ಹಿಂದೆ ದೊಡ್ಡ ಭ್ರಷ್ಟಾಚಾರವೇ ನಡೆದಿದೆ ಎನ್ನೋದು ಹೋರಾಟಗಾರರ ಆಕ್ರೋಶ.

ಮತ್ತೊಂದೆಡೆ ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರವು ರೆಸಾರ್ಟ್ ನಿರ್ಮಾಣ ಯೋಜನೆಗೂ ಒಪ್ಪಿಗೆ ನೀಡಿದೆ. ಇಲ್ಲಿಯೂ ಕೂಡ ಕೊಟ್ಟಿರುವ ಪ್ಲಾನ್ ನಲ್ಲಿ ಬಫರ್ ಝೋನ್ ಜಾಗ ಒತ್ತುವರಿಯಾಗಿಲ್ಲವೆಂದು ಒಪ್ಪಿಗೆ ನೀಡಿದೆ. ಈ ಕುರಿತು ಮತ್ತೊಮ್ಮೆ ಪರಿಶೀಲನೆ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ ಆ ಬಳಿಕ ಅಬ್ದುಲ್ ಸಲಾಂ ಅವರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧವೇ ಕೋರ್ಟ್ ಮೊರೆ ಹೋಗಿ ತಮ್ಮ ಜಾಗಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಎಂಟ್ರಿ ಕೊಡದಂತೆ ಲಾಯರ್ ನೋಟಿಸ್ ಮಾಡಿದ್ದಾರೆ. ಸದ್ಯ ಪ್ರಕರಣ ಈಗಷ್ಟೇ ತಮ್ಮ ಗಮನಕ್ಕೆ ಬಂದಿದ್ದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಕ್ರಮವಹಿಸುವಂತೆ ಸೂಚಿಸುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *