ಬೈಕ್ ಸ್ಟಂಟ್ ರಾಣಿಯರಿಗೆ ಬಿತ್ತು ಭಾರೀ ದಂಡ

ಲಕ್ನೋ: ಹುಡುಗಿಯರಿಬ್ಬರು ಬೈಕ್‍ನಲ್ಲಿ ಸ್ಟಂಟ್ ಮಾಡಿ ಅದನ್ನು ಚಿತ್ರೀಕರಣ ಮಾಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಇದನ್ನು ಗಮನಿಸಿರುವ ಪೊಲೀಸರು ಬೈಕ್ ರೈಡ್ ಮಾಡಿದ ಹುಡುಗಿಯ ಮೇಲೆ 28 ಸಾವಿರ ರೂಪಾಯಿ ದಂಡ ಪ್ರಯೋಗ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಉತ್ತರ ಪ್ರದೇಶದ ಗಾಜಿಯಾಬಾದ್‍ನ ಶಿವಾಂಗಿ ದಬಾಸ್ ತನ್ನ ಸ್ನೇಹಿತೆ ಕುಸ್ತಿಪಟು ಸ್ನೇಹಾ ರಘವಂಶಿಯ ಹೆಗಲ ಮೇಲೆ ಕೂತು ಬುಲೆಟ್ ಬೈಕ್‍ನಲ್ಲಿ ಗಾಜಿಯಾಬಾದ್‍ನಲ್ಲಿ ರೌಂಡ್ಸ್ ಹೊಡೆದಿದ್ದಾಳೆ.

ರೌಂಡ್ಸ್ ಹೊಡೆಯುತ್ತಿರುವುದನ್ನು ಚಿತ್ರೀಕರಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದು, ಈ ವೀಡಿಯೋ ವೈರಲ್ ಆಗಿತ್ತು. ಇದನ್ನು ಗಮನಿಸಿದ ಸ್ಥಳೀಯ ಠಾಣೆ ಪೊಲೀಸರು ಬೈಕ್ ರೈಡ್ ಮಾಡಿದ ಸ್ನೇಹಾ ರಘವಂಶಿಗೆ 11,00 ರೂಪಾಯಿ ಮತ್ತು ಬೈಕ್‍ನ ಮಾಲಿಕ ಸಂಜಯ್ ಕುಮಾರ್ ಎಂಬವರಿಗೆ 17,000 ರೂಪಾಯಿ ಸೇರಿ ಒಟ್ಟು 28,000 ರೂಪಾಯಿ ದಂಡ ಕಟ್ಟುವಂತೆ ನೋಟಿಸ್ ನೀಡಿದ್ದಾರೆ.

ಈ ಕುರಿತು ಸ್ಥಳೀಯ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶಿವಾಂಗಿ, ನಾನು ನನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದೆ. ಇದು ಕೆಲವೇ ದಿನಗಳಲ್ಲಿ ವೈರಲ್ ಆಗಿತ್ತು. ಕಡೆಗೆ ಪೊಲೀಸರು ಈ ವೀಡಿಯೋವನ್ನು ನೋಡಿ ನಮಗೆ ದಂಡ ಪ್ರಯೋಗಿಸಿದ್ದಾರೆ ಎಂದಿದ್ದಾರೆ.

ಗಾಜಿಯಾಬಾದ್ ಎಸ್.ಪಿ ರಾಮನಂದ್ ಕುಶ್ವಹ ಪ್ರತಿಕ್ರಿಯಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡಿ, ಲೈಸನ್ಸ್ ಇಲ್ಲದೆ ಬೈಕ್ ರೈಡ್ ಮತ್ತು ಸಾರ್ವಜನಿಕ ಸ್ಥಳದಲ್ಲಿ ಸ್ಟಂಟ್ ಮಾಡಿರುವ ಕಾರಣಕ್ಕಾಗಿ ಈ ಹುಡುಗಿಯರಿಗೆ ದಂಡ ಹಾಕಲಾಗಿದೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *