ಸಾರ್ವಜನಿಕ ಸ್ಥಳದಲ್ಲಿ ಐವರಿಂದ ಅಸಭ್ಯ ವರ್ತನೆ- ಮಹಿಳೆಗೆ 5 ಸಾವಿರ ದಂಡ, 2 ದಿನ ಜೈಲು ಶಿಕ್ಷೆ

ಲಕ್ನೋ: ಸಾರ್ವಜನಿಕ ಸ್ಥಳದಲ್ಲಿ ಮಹಿಳೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಉತ್ತರ ಪ್ರದೇಶದ ಮುಜಾಫರ್‍ನಗರ ನ್ಯಾಯಾಲಯ 2 ದಿನ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ.

ನಾಲ್ಕು ವರ್ಷಗಳ ಹಿಂದೆ ಸೆಪ್ಟೆಂಬರ್ 2016ರಲ್ಲಿ ನ್ಯೂ ಮಂಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ಮಹಿಳೆ ಹಾಗೂ ಆಕೆಯ ನಾಲ್ವರು ಸ್ನೇಹಿತರು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ಒಬ್ಬರಿಗೊಬ್ಬರು ಸ್ಪರ್ಶಿಸಿದ್ದಕ್ಕೆ ಐಪಿಸಿ ಸೆಕ್ಷನ್ 294(ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಆರೋಪಿಗಳನ್ನು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಪ್ರಕರಣದ ಇತರ ನಾಲ್ಕು ಆರೋಪಿಗಳಾದ ಇಬ್ಬರು ಪುರುಷರು, ಇಬ್ಬರು ಮಹಿಳೆಯರಿಗೆ ಶಿಕ್ಷೆಯ ಪ್ರಮಾಣವನ್ನು ಪ್ರತ್ಯೇಕವಾಗಿ ಆಲಿಸಲಾಗುತ್ತಿರುವುದರಿಂದ ನಂತರ ತೀರ್ಪು ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್(ಎಸಿಜೆಎಂ) ನ್ಯಾಯಾಲಯ 2 ದಿನ ಜೈಲು ಶಿಕ್ಷೆ, 5 ಸಾವಿರ ದಂಡ ವಿಧಿಸಿದೆ. ಎಸಿಜೆಎಂ(1) ನ್ಯಾಯಾಲಯ ಈ ಆದೇಶ ಹೊರಡಿಸಿದ್ದು, ಮಹಿಳೆ ದಂಡ ಪಾವತಿಸಲು ಸಾಧ್ಯವಾಗದಿದ್ದರೆ ಹೆಚ್ಚುವರಿಯಾಗಿ 7 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಪ್ರಾಸಿಕ್ಯೂಶನ್ ಪರ ವಕೀಲ ರಾಮ್ ಅವತಾರ್ ಸಿಂಗ್ ತಿಳಿಸಿದ್ದಾರೆ.

ಸಬ್ ಇನ್‍ಸ್ಪೆಕ್ಟರ್ ಬಲೇಂದರ್ ಸಿಂಗ್ ಹಾಗೂ ಇತರೆ ಪೊಲೀಸ್ ಪೇದೆಗಳು ಪ್ಯಾಟ್ರೋಲ್‍ನಲ್ಲಿದ್ದಾಗ ಐವರು ಆರೋಪಿಗಳು ಅಸಭ್ಯವಾಗಿ ವರ್ತಿಸಿರುವುದನ್ನು ಕಂಡಿದ್ದರು. ಬಳಿಕ ಪ್ರಕರಣ ದಾಖಲಾಗಿತ್ತು.

Comments

Leave a Reply

Your email address will not be published. Required fields are marked *