ಚಿತ್ರರಂಗದ ಉದಯೋನ್ಮುಖ ಮೇಕಪ್ ಕಲಾವಿದೆ ಶ್ವೇತ ಸುಧಿ

ತ್ತೀಚಿನ ದಿನಗಳಲ್ಲಿ ಮೇಕಪ್ ಇಲ್ಲದೆ ಹೊರಗೆ ಹೋಗುವವರ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ಸಿನಿಮಾ ಸೀರಿಯಲ್ ಆರ್ಟಿಸ್ಟ್ ಮೇಕಪ್ ಇಲ್ಲದೇ ಹೊರಗೆ ಕಾಲಿಡೋದಿಲ್ಲ ಅನ್ನೋದಂತು ಸುಳ್ಳಲ್ಲ. ಸ್ಟಾರ್ ನಟ-ನಟಿಯರಂತೂ ಪರ್ಸನಲ್ ಮೇಕಪ್ ಕಲಾವಿದರನ್ನ ತಮ್ಮ ಜೊತೆ ಇಟ್ಟುಕೊಂಡಿರುತ್ತಾರೆ. ಇದರಿಂದ ಇತ್ತೀಚಿನ ದಿನಗಳಲ್ಲಿ ಮೇಕಪ್ ಕಲಾವಿದರಿಗೂ ಬೇಡಿಕೆ ಹೆಚ್ಚಾಗುತ್ತಿದ್ದು. ಮೇಕಪ್ ಕೋರ್ಸ್ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈಗಾಗಲೇ ಹಲವಾರು ಮೇಕಪ್ ಕಲಾವಿದರು ತಮ್ಮದೇ ವಿಭಿನ್ನ ಸ್ಟೈಲ್ ಮೂಲಕ ಖ್ಯಾತಿಯನ್ನು ಗಳಿಸುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಉದಯೋನ್ಮುಖ ಮೇಕಪ್ ಕಲಾವಿದೆ ಶ್ವೇತ ಸುಧಿ.

ಮೇಕಪ್ ಕಲಾವಿದೆಯಾಗಿ ಹೆಸರು ಮಾಡಬೇಕೆಂಬ ಕನಸಿಟ್ಟುಕೊಂಡು ಮೇಕಪ್ ಕೋರ್ಸ್ ಮಾಡಿ ಹಂತ ಹಂತವಾಗಿ ಬೆಳೆಯುತ್ತಿರುವ ಪ್ರತಿಭೆ ಶ್ವೇತ ಸುಧಿ. ಮೂಲತಃ ಬೆಂಗಳೂರಿನ ದೇವನಹಳ್ಳಿಯವರಾದ ಇವರು, ಮೇಕಪ್ ಲೋಕದಲ್ಲಿ ತಮ್ಮದೇ ಛಾಪನ್ನು ಮೂಡಿಸುತ್ತಿರುವ ಕಲಾವಿದೆ. ಮೇಕಪ್ ಪ್ಯಾಷನ್ ಸೆಳೆತಕ್ಕೆ ಒಳಗಾಗಿ ಖಾಸಗಿ ಕಂಪನಿಯ ಕೆಲಸ ಬಿಟ್ಟು ಮೇಕಪ್ ಕೋರ್ಸ್ ಮುಗಿಸಿ ತಮ್ಮದೇ ಬದುಕು ಕಟ್ಟಿಕೊಂಡಿದ್ದಾರೆ. ಕಳೆದ ಮೂರುವರೆ ವರ್ಷದಿಂದ ಸ್ವತಂತ ಮೇಕಪ್ ಕಲಾವಿದೆಯಾಗಿ ಸಿನಿಮಾ ಹಾಗೂ ಸೀರಿಯಲ್ ಆರ್ಟಿಸ್ಟ್ ಗಳ ನೆಚ್ಚಿನ ಮೇಕಪ್ ಕಲಾವಿದೆಯಾಗಿ ಖ್ಯಾತಿಗಳಿಸಿಕೊಂಡಿದ್ದಾರೆ ಶ್ವೇತ ಸುಧಿ.

ಇಂದು ತಮ್ಮದೇ ಐಡೆಂಟಿಟಿ ಹೊಂದಿರುವ ಶ್ವೇತ ಸುಧಿ ಆರಂಭಿಕ ದಿನಗಳು ಸುಲಭದ ಹಾದಿಯಾಗಿರಲಿಲ್ಲ. ಈ ಕುರಿತು ಶ್ವೇತ ಸುಧಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮೇಕಪ್ ಕೋರ್ಸ್ ಮುಗಿಸಿದ ನಂತರ ಕೆಲಸ ಸಿಗುತ್ತೆ, ಗ್ರಾಹಕರು ಸಿಗುತ್ತಾರೆ ಎಂಬ ಗ್ಯಾರಂಟಿ ಇರೋದಿಲ್ಲ. ಆರಂಭಿಕ ದಿನಗಳಲ್ಲಿ ನನ್ನ ಜೊತೆ ಕೋರ್ಸ್ ಮಾಡಿದವರೆಲ್ಲ ಬೇರೆ ಪ್ರೊಫೆಷನ್ ನೋಡಿಕೊಂಡರು. ಆದರೆ ನನಗೆ ಇದೇ ಪ್ರೊಫೆಷನ್ ನಲ್ಲಿ ಬೆಳೆಯಬೇಕು ಎಂಬ ಆಸೆ ಇತ್ತು. ಅಲ್ಲೊಂದು ಇಲ್ಲೊಂದು ಆಫರ್ ಸಿಕ್ಕಾಗ ನಾನೇ ಟ್ರಾವೆಲ್ ಮಾಡಿಕೊಂಡು ಹೋಗಿ ಮೇಕಪ್ ಮಾಡಿ ಅವರು ಕೊಟ್ಟಷ್ಟು ಹಣ ತೆಗೆದುಕೊಳ್ಳುತ್ತಿದ್ದೆ. ಹಾಗಂತ ಗುಣಮಟ್ಟದಲ್ಲಿ ನಾನು ಯಾವುದೇ ಹೊಂದಾಣಿಕೆ ಮಾಡಿಕೊಳ್ಳುತ್ತಿರಲಿಲ್ಲ. ಉತ್ತಮ ಗುಣಮಟ್ಟದ ಮೇಕಪ್ ಕಿಟ್ ಗಳನ್ನೇ ಬಳಸುತ್ತಿದ್ದೆ. ಒಂದಷ್ಟು ತಿಂಗಳುಗಳ ಏಳುಬೀಳಿನ ನಂತರ ನನ್ನ ಕೆಲಸದ ಗುಣಮಟ್ಟ ನೋಡಿ ಆಫರ್ ಗಳು ಬರಲಾರಂಭಿಸಿದವು. ಈಗ ವರ್ಷದಲ್ಲಿ ಮುನ್ನೂರು ದಿನವಾದರೂ ಬಿಡುವಿಲ್ಲದೆ ಕೆಲಸ ಮಾಡುತ್ತೇನೆ ಎಂದು ತಾವು ಬೆಳೆದು ಬಂದ ಹಾದಿಯನ್ನು ಮೆಲುಕು ಹಾಕುತ್ತಾರೆ ಶ್ವೇತ ಸುಧಿ.

ಸಿನಿಮಾ, ಸೀರಿಯಲ್ ಆರ್ಟಿಸ್ಟ್ ಗಳಿಗಷ್ಟೇ ಮೇಕಪ್ ಮಾಡಬೇಕು ಎಂದೇನೂ ಆಸೆಯಿಲ್ಲ. ಒಟ್ಟಿನಲ್ಲಿ ಮೇಕಪ್ ಮಾಡುತ್ತಿರಬೇಕು ಹೊಸ ಹೊಸ ಪ್ರಯತ್ನ ಮಾಡಬೇಕು ಎನ್ನೋದಷ್ಟೇ ನನ್ನ ಆಸೆ ಎನ್ನುವ ಇವರು, ತಮ್ಮದೇ ಸಿಗ್ನೇಚರ್ ಲುಕ್ ಕ್ರಿಯೇಟ್ ಮಾಡಬೇಕು ಎಂಬ ಬಹುದೊಡ್ಡ ಕನಸಿಟ್ಟುಕೊಂಡಿದ್ದಾರೆ. ಇನ್ನು ಬಿಡುವಿಲ್ಲದೆ ಕೆಲಸದ ನಡುವೆಯೂ ಮೇಕಪ್ ಕಲಿಕೆಯಲ್ಲಿ ಆಸಕ್ತಿ ಇರುವವರಿಗೆ ತರಗತಿಗಳನ್ನು ಕೂಡ ತೆಗೆದುಕೊಳ್ಳುತ್ತಾರೆ. ನಿರಂತರ ಕಲಿಕೆ, ತಾಳ್ಮೆ, ಹೊಸತನದಿಂದ ಸ್ವತಂತ್ರ ಮೇಕಪ್ ಕಲಾವಿದೆಯಾಗಿ ಹೆಸರು ಗಳಿಸಿರುವ ಶ್ವೇತ ಸುಧಿ ಇಂದು ಚಿತ್ರರಂಗದ ಬೇಡಿಕೆಯ ಮೇಕಪ್ ಕಲಾವಿದೆಯಾಗಿ ಬೆಳೆಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *